ತುಮಕೂರು:

       ತುಮಕೂರು ಜಿಲ್ಲಾ ಪೊಲೀಸ್ ಜಿಲ್ಲಾ ವರೀಷ್ಠಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರಿನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ.

       ಜಿಲ್ಲಾ ಪೊಲೀಸ್ ಕಛೇರಿಯ ಮೊಗಸಾಲೆಯಿಂದ ಭ್ರಷ್ಟಚಾರದ ಕಮಟು ವಾಸನೆ ಎಸಿಬಿ ಕಛೇರಿಯ ಅಂಗಳದವರೆಗೂ ತಲುಪಿದೆ ಎಂದರೆ ಇಲ್ಲಿನ ನಡೆದಿರುವ ಭ್ರಷ್ಟಾಚಾರ ತೀವ್ರತೆ ಎಷ್ಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆಯ ಹೆಸರಿನಲ್ಲಿ ಭ್ರಷ್ಟಾಚಾರವಾಗಿರುವ ಆರೋಪ ವ್ಯಾಪಕವಾಗಿದ್ದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಹೆಸರಿನಲ್ಲಿಯೂ ಅಕ್ರಮ ಭ್ರಷ್ಟಾಚಾರ ಮಾಡಿರುವುದು ಕೇಳಿ ಬರುತ್ತಿದೆ.

      ಈ ಭ್ರಷ್ಟಾಚಾರ ಕುರಿತು ಭ್ರಷ್ಟಾಚಾರ ನಿಗ್ರಹದಳ ಕಛೇರಿಗೆ ಲಿಖಿತ ದೂರು ನೀಡಿದ್ದು ಈ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಂತಿದೆ. ಎಸಿಬಿ ಅಧಿಕಾರಿಗಳು ತಮ್ಮ ತನಿಖೆಗೆ ಪೂರಕವಾದ ದಾಖಲಾತಿಗಳನ್ನ ಕೇಳಿದರೆ ಅದಕ್ಕೆ ಸ್ಪಂದಿಸದ ಎಸ್‍ಪಿ ಕಛೇರಿಯ ನುಂಗಣ್ಣರ ಪಡೆ ತಾನು ಮಾಡಿದ್ದೆಲ್ಲವೂ ಸರಿ ಇದೆ ಎನ್ನುವ ಮಟ್ಟಕ್ಕೆ ಮಾತನಾಡುತ್ತಾರೆ.

       ಸಾಮಾನ್ಯವಾಗಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಭ್ರಷ್ಟಾಚಾರ ಕೇಳಿಬಂದ ಅಧಿಕಾರಿ ಅಥವಾ ಆ ಕಛೇರಿಯ ವಿರುದ್ಧ ತನಿಖೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಅಗತ್ಯ ದಾಖಲಾತಿಗಳನ್ನು ಒದಗಿಸ ಪಕ್ಷದಲ್ಲಿ ಆ ಕಚೇರಿಗೆ ತೆರಳಿ ದಾಖಲಾತಿಗಳನ್ನು ಪರಿಶೀಲಿಸಿ ತಮಗೆ ಬೇಕಾದ ದಾಖಲಾತಿಗಳನ್ನು ಪಡೆದು ಅಥವಾ ಜಪ್ತಿ ಮಾಡಿಕೊಂಡು ಬರುವುದು ಸರ್ವೆ ಸಾಮಾನ್ಯ. ಆದರೆ, ಸದರಿ ಪ್ರಕರಣದಲ್ಲಿ ಮಾತೃ ಇಲಾಖೆ ಎಂಬ ಕಾರಣಕ್ಕಾಗಿ ಅವರು ಹಾಗೇ ಮಾಡದಿರುವುದು ಎಸ್‍ಪಿ ಕಛೇರಿಯಲ್ಲಿ ಬಹಳಷ್ಟು ವರ್ಷಗಳಿಂದ ಅಂಡೂರಿ ಭ್ರಷ್ಟತೆಯ ಕಬಂಧಬಾಹುಗಳಿಂದ ಇಡೀ ಕಚೇರಿ ಹಿಡಿತವನ್ನು ಸಾಧಿಸುವ ಹಪಹಪಿಯಲ್ಲಿರುವ ಇಲ್ಲಿಯ ಕಡುಭ್ರಷ್ಟರು ಯಾವುದಕ್ಕೂ ಕ್ಯಾರೇ ಎನ್ನದೇ ಭ್ರಷ್ಟಾಚಾರವೊಂದೆ ನಮ್ಮ ಮುಂದಿರುವುದು ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.

      ಸರ್ವೇಸಾಮಾನ್ಯವಾಗಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ವರ್ಗ ತನ್ನ ಕರ್ತವ್ಯದ ಸಂದರ್ಭದಲ್ಲಿ ಕರ್ತವ್ಯದ ನಿಮಿತ್ತ ಅನ್ಯ ಪ್ರದೇಶಗಳಿಗೆ ತೆರಳುವಾಗ ಅದಕ್ಕೆ ತಗಲುವ ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆ (TA/DA)ಯ ವೆಚ್ಚವನ್ನು ಅದಕ್ಕೆ ಸಂಬಂಧಿಸಿದ ದಾಖಲೆ ಮತ್ತು ಬಿಲ್ಲುಗಳನ್ನು ಒದಗಿಸಿ ಇಲಾಖೆಯಿಂದ ಹಿಂಪಡೆಯುವುದು ಸಹಜ.

      ಸದರಿ ನೌಕರರು ನೀಡಿದ ಬಿಲ್ಲುಗಳನ್ನು ಪರಿಶೀಲಿಸಿದ ನಂತರ ಹಣವನ್ನು ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಪ್ರವಾಸವನ್ನೇ ಮಾಡದ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದ್ದು, ಹಣ ವರ್ಗಾವಣೆಯಾದವರ ದೂರವಾಣಿಗಳಿಗೆ ಕರೆ ಮಾಡಿ ನಮ್ಮ ಕಚೇರಿ ಒಂದು ಸಣ್ಣ ತಪ್ಪಿನಿಂದ ನಿಮ್ಮಗಳ ಹೆಚ್ಚುವರಿಯಾಗಿ ಹಣವರ್ಗಾವಣೆಯಾಗಿದೆ ಹೆಚ್ಚುವರಿಯಾಗಿ ವರ್ಗಾ ವಣೆಯಾಗಿರುವ ಹಣವನ್ನು ನನ್ನ ಬ್ಯಾಂಕ್ ಖಾತೆ ಅಥವಾ ಫೋನ್ ಪೇ ಮುಖಾಂತರ ವರ್ಗಾವಹಿಸಿ ಇಲ್ಲವೇ ನಗದನ್ನಾದರೂ ನಮಗೆ ನೇರವಾಗಿ ಕಳುಹಿಸಿಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಹೇಳಲಾಗುತ್ತಿದೆ ಎನ್ನುವ ಆರೋಪವಿದೆ. ಈ ಕಛೇರಿಯಿಂದಲೇ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂತಹ ಭ್ರಷ್ಟ ವ್ಯವಸ್ಥೆಯ ನಾಯಕನಂತೆ ಬಹಳಷ್ಟು ವರ್ಷಗಳಿಂದ ಅದೇ ಕಛೇರಿಯಲ್ಲಿ ಪ್ರಾಬಲ್ಯ ಸಾಧಿಸಿರುವ ವ್ಯಕ್ತಿ ಕರೆ ಮಾಡಿ ಮಾತನಾಡುತ್ತಾರೆ ಎಂದರೆ ವಿಧಿಯಿಲ್ಲದೆ ತಮ್ಮ ಖಾತೆಗಳಿಗೆ ಬಂದಿರುವ ಹೆಚ್ಚುವರಿ ಹಣವನ್ನು ಮರು ಮಾತಾಡದೆ ಅಧಿಕಾರಿಯ ಖಾಸಗಿ ಖಾತೆಗೆ ಜಮೆಮಾಡಿ ಸುಮ್ಮನಾಗುತ್ತಿದ್ದಾರೆ, ಕೆಲವರು ನೇರವಾಗಿ ನಗದನ್ನೇ ತಂದು ಕೊಡುತ್ತಿದ್ದಾರೆ.

      ಒಂದು ವೇಳೆ ಕೈತಪ್ಪಿನಿಂದ ಅಥವಾ ತಾಂತ್ರಿಕ ದೋಷದಿಂದ ಹೆಚ್ಚುವರಿಯಾಗಿ ಹಣ ವರ್ಗಾವಣೆಯಾಗಿದ್ದರೆ ಇಲಾಖೆಯ ಅಧಿಕೃತ ಖಾತೆಗೆ ಮರುಪಾವತಿಸುವಂತೆ ಲಿಖಿತವಾಗಿಯೇ ಆದೇಶಿಸಬಹುದಿತ್ತು. ಆದರೆ, ಇವೆಲ್ಲವನ್ನು ಬಿಟ್ಟು ವೈಯಕ್ತಿಕ ಖಾತೆಗಳಿಗೆ ಹಾಗೂ ನಗದು ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದಾರೆಂದರೆ ಇದು ಜಿಲ್ಲಾ ಪೊಲೀಸ್ ಕಛೇರಿಯ ಭ್ರಹ್ಮಾಂಡ ಭ್ರಷ್ಟಾಚಾರ.

      ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಲ್ಲದೆ ಈ ಜಿಲ್ಲೆಯಿಂದ ವರ್ಗಾವಣೆಯಾಗಿ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಖಾತೆಗೂ ಹಣ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಂಬಂಧ ಸಂಬಂಧಪಟ್ಟವರನ್ನ ಪ್ರಶ್ನಿಸಿದಾಗ ಕೆಲಸದ ಒತ್ತಡದ ನಡುವೆ ಕಣ್ತಪ್ಪಿನಿಂದ ಈ ರೀತಿಯಾಗಿದೆ ಎಂದು ಸಮಾಜಾಹಿಷಿ ನೀಡಿ ತಿಪ್ಪೆ ಸಾರಿಸಲಾಗಿದೆ. ಈ ಸಂಬಂಧ ಎಸಿಬಿ ಅಧಿಕಾರಿಗಳು ತಮ್ಮ ತನಿಖೆಯನ್ನ ತೀವ್ರಗೊಳಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರಿನಲ್ಲಿ ಆಗಿರುವ ಭ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆಳೆದು ಇಲಾಖೆಗೆ ಆಗಿರುವ ನಷ್ಟವನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ತುಂಬಿಸಿದರೆ ಸರಿಯಾಗಬಹುದೆಂದು ಇಲಾಖೆಯ ಒಳಗಿನವರು ಪಿಸುಗುಟ್ಟುತ್ತಿದ್ದಾರೆ. ಎಸಿಬಿಯ ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಬಹಿರಂಗಗೊಳ್ಳಲಿದೆ.

(Visited 1,222 times, 1 visits today)