ತುಮಕೂರು:


ಕುಣಿಗಲ್ ಶಾಸಕರ ಹೆಸರಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಪ್ರತಿಭಟನೆ ಮಾಡಿದ್ದನ್ನೇ ನೆಪ ಮಾಡಿಕೊಂಡು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಹಾಗೂ ಅವರ ಸಂಗಡಿಗರ ವಿರುದ್ದ ಪೊಲೀಸರು ಐಪಿಸಿ ಕಲಂ 307ರ ಅಡಿಯಲ್ಲಿ ಕೇಸು ದಾಖಲಿಸಿದ್ದು, ಕೂಡಲೇ ಕೇಸು ಹಿಂಪಡೆಯುವಂತೆ ಆಗ್ರಹಿಸಿ ಇಂದು ರೈತ ಸಂಘದ ಪದಾಧಿಕಾರಿಗಳು, ಕೆ.ಆರ್.ಎಸ್ ಪಾರ್ಟಿಯ ಸಹಕಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರಣ್ಣ ಅವರ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ, ರೈತ ಮುಖಂಡರು, ಬೀಸೆಗೌಡನದೊಡ್ಡಿ, ರಾಜಪ್ಪನದೊಡ್ಡಿ, ಹೊನ್ನಮಾಚನಹಳ್ಳಿ, ಹೊಸಹಳ್ಳಿದೊಡ್ಡಿ,ನಿಡಶಾಲೆ ಗ್ರಾಮಪಂಚಾಯಿತಿಗಳ ಸಾರ್ವಜನಿಕರ ಮೇಲೆ ಶಾಸಕರ ಕುಮ್ಮಕ್ಕಿನಿಂದ ಕೊಲೆಯತ್ನ ಪ್ರಕರಣ ದಾಖಲು ಮಾಡಿರುವುದು ಖಂಡನೀಯ.ಕೂಡಲೇ ಕೇಸ್‍ಗೆ ಬಿ.ರಿಪೋರ್ಟ್ ಹಾಕಿ, ಶಾಸಕರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ನಿರತ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ವೀರಣ್ಣ,ಬೀಸೆಗೌಡನದೊಡ್ಡಿ ಗ್ರಾಮದ ಸರ್ವೆ ನಂ 82ರಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಹೆಸರಿನ್ಲಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಪ್ರಶ್ನಿಸಲು ತೆರಳಿದ್ದ ಆನಂದ ಪಟೇಲ್ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಪ್ರಕರಣ ದಾಖಲಿಸಿ,ಕೆಲವರನ್ನು ಬಂಧಿಸಿದ್ದು, ಇದು ಖಂಡನೀಯ.ಕೂಡಲೇ ಇದನ್ನು ಕೈಬಿಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಪೊಲೀಸರು ಈ ಪ್ರಕರಣದಲ್ಲಿ ರೌಡಿಗಳ ರೀತಿ ವರ್ತಿಸಿದ್ದಾರೆ.ಆನಂದ ಪಟೇಲ್ ಅವರ ಬೆಂಗಳೂರಿನ ಮನೆಗೆ ಹೋಗಿ, ಅವರ ಹೆಂಡತಿ ಒಬ್ಬರೇ ಇರುವಾಗ ಅನುಚಿತವಾಗಿ ವರ್ತಿಸಿರುವುದಲ್ಲದೇ,ಕಬೋರ್ಡ್,ಕಾರು ಅಡಿಯಲ್ಲಿ ಹುಡುಕಿ ಇನ್ನಿಲ್ಲದಂತೆ ಕಿರುಕುಳ ನೀಡಿದ್ದಾರೆ. ಪೊಲೀಸರಿಗೆ ಹೆಂಡತಿ ಮಕ್ಕಳು ಇಲ್ಲವೇ, ಇವರಿಗೆ ಮಾನವೀಯತೆ ಎಂಬುದು ಇಲ್ಲವೇ ಎಂದು ಪ್ರಶ್ನಿಸಿದ ವೀರೇಶ್,ಎಫ್‍ಐಆರ್ ಹಾಕುವ ಮೊದಲೇ ಯಾವುದೇ ಸರ್ಚ ವಾರೆಂಟ್ ಇಲ್ಲದೆ ದಾಳಿ ಮಾಡಲು ಅನುಮತಿ ನೀಡಿದವರು ಯಾರು. ಕೂಡಲೇ ಹುಲಿಯೂರು ದುರ್ಗ ಸಬ್ ಇನ್ಸ್ ಪೆಕ್ಟರ್ ಚೇತನ್ ಕುಮಾರ್ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ರೈತ ಹೋರಾಟಗಾರ ಕೆಂಕರೆ ಸತೀಶ್ ಮಾತನಾಡಿ, ಕಲ್ಲು ಗಣಿಗಾರಿಕೆಯಿಂದ ಬೀಸೆಗೌಡನದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆಯುವ ರೇಷ್ಮೆ ಉಪ್ಪುನೇರಳೆ ಗಿಡದ ಮೇಲೆ ಧೂಳಿನ ಕಣಗಳು ಕುಳಿತು,ರೇಷ್ಮೆ ಗೂಡುಕಟ್ಟುತ್ತಿಲ್ಲ.ತಿನ್ನುವ ಅನ್ನದ ಮೇಲೆ ಕಲ್ಲಿನ ಕಣಗಳಿರುತ್ತವೆ. ಕುಡಿಯುವ ನೀರು ಕೂಡ ಕಲುಷಿತಗೊಂಡಿದೆ.ಜನರು ಹಲವಾರು ರೋಗಗಳಿಂದ ನರಳುತ್ತಿದ್ದಾರೆ. ಇದರ ವಿರುದ್ದ ಗ್ರಾಮಸ್ಥರು, ಅದರಲ್ಲಿ ಮಹಿಳೆಯರು ಅಹೋರಾತ್ರಿ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಇದುವರೆಗೆ ಕ್ರಮ ಕೈಗೊಂಡಿಲ್ಲ.ಗ್ರಾಮಸ್ಥರ ನಡುವೆ ನಡೆದ ಗಲಾಟೆಗೆ ಆನಂದ ಪಟೇಲ್ ಅವರ ಹೆಸರು ತಳಕು ಹಾಕಿ ಅವರ ವಿರುದ್ದ 8 ವಿವಿಧ ಸಕ್ಷನ್‍ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.ಇದು ಖಂಡನೀಯ. ಸರಕಾರದ ಈ ನಡೆ ಅಧಿಕಾರಿ ವರ್ಗದ ದಾಸ್ಯತನಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ದಾವಣಗೆರೆ ಜಿಲ್ಲಾಧ್ಯಕ್ಷ ಚನ್ನಬಸಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ್ ಆರಾಧ್ಯ ಹಾಸನ ಜಿಲ್ಲಾಧ್ಯಕ್ಷ ಬಾಬು ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(Visited 29 times, 1 visits today)