ತುಮಕೂರು:


ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾವೇಶಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರವೀಣ್ ಹತ್ಯೆಗೈದಿರುವ ಆರೋಪಿಗಳ ಭಾವಚಿತ್ರಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಂಗಳೂರಿನ ಋಷಿಕುಮಾರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಿಂದೂಗಳ ಹತ್ಯೆ ನಡೆಯುತ್ತಿದೆ. ಪ್ರವೀಣ್ ಅವರದ್ದು 35ನೇ ಹತ್ಯೆಯಾಗಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲೂ ಹಿಂದೂ ಕಾರ್ಯಕರ್ತರಿದ್ದಾರೆ. ಆದರೂ ಬಿಜೆಪಿಯಲ್ಲಿರುವ ಹಿಂದೂಗಳನ್ನೇ ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ನಿಮಗೆ ಧಮ್ ಇದ್ದರೆ ನನ್ನನ್ನು ಹೊಡೆಯಿರಿ. ನನಗೆ ಯಾವುದೇ ಭದ್ರತೆ ಇಲ್ಲ ಎಂದ ಸ್ವಾಮೀಜಿ, ನನ್ನ ಮೇಲೆ ಬಹಳಷ್ಟು ದ್ವೇಷ ಸಾಧಿಸುತ್ತಿದ್ದಾರೆ ಎಂದು ಗುಪ್ತ ದಳದ ಮಾಹಿತಿ ಇದೆ ಎಂದರು.
ಮುಂದಿನ 3 ದಿನದಲ್ಲಿ ಪ್ರವೀಣ್ ಹತ್ಯೆ ಆರೋಪಿಗಳ ಪತ್ತೆಹಚ್ಚಿ ಎನ್‍ಕೌಂಟರ್ ಮಾಡದಿದ್ದರೆ ತುಮಕೂರಿನಿಂದ ಮುಖ್ಯಮಂತ್ರಿಗಳ ಮನೆವರೆಗೆ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಾವು ಇನ್ನೆಷ್ಟು ಶಾಂತಿ ಕಾಪಾಡಿಕೊಳ್ಳಬೇಕು. ಯುಪಿಯಲ್ಲಿನ ಯೋಗಿ ಆದಿತ್ಯನಾಥ ಸರ್ಕಾರದ ಕಾರ್ಯವೈಖರಿಯನ್ನು ನೆನಪಿಸಿಕೊಳ್ಳಿ. ಆರಕ್ಷಕರಿಗೆ ಸ್ವಾತಂತ್ರ್ಯ ನೀಡಿ. ಈ ಕೆಲಸವನ್ನು ಮಾಡದಿದ್ದರೆ ಹಂತಕರಿಗೆ ಎಡೆಮುರಿ ಕಟ್ಟುವುದು ಕಷ್ಟದ ಕೆಲಸ ಎಂದರು.
ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿರುವ ಸಂಘಟನೆಗಳಾದ ಪಾಪುಲರ್ ಫ್ರೆಂಡ್ ಆಫ್ ಇಂಡಿಯಾ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು. ಇಲ್ಲವಾದರೆ ಇದೇ ರೀತಿಯ ಹೀನ ಕೃತ್ಯಗಳು ರಾಜ್ಯದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲು ಹಿಂದೂ ಕಾರ್ಯಕರ್ತರು ಮುಂದಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರವನ್ನು ನೆಚ್ಚಿಕೊಂಡು ಪ್ರತಿಭಟನೆ ಮಾಡುತ್ತಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲಿದ್ದೇವೆ. ಅಮಾಯಕ ಕಾರ್ಯಕರ್ತರ ಹತ್ಯೆಗಳನ್ನು ಸರ್ಕಾರ ತಡೆಗಟ್ಟಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಬಜರಂಗ ದಳದ ಮಂಜು ಭಾರ್ಗವ ಮಾತನಾಡಿ, ಎಸ್‍ಡಿಪಿಐ, ಪಿಎಫ್‍ಐನ ಗೂಂಡಾ ಕಾರ್ಯಕರ್ತರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜ ಹಿಂದೆ ಸರಿಯುತ್ತದೆ. ಆಗ ಮತ್ತಷ್ಟು ಈ ಸಮಾಜವನ್ನು ಎದುರಿಸಬಹುದು ಎಂದು ಆ ಸಂಘಟನೆಗಳು ತಿಳಿದಿಕೊಂಡಿವೆ. ಹಾಗಾಗಿ ಪ್ರವೀಣ್ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನ ಸಹಿಸಲಾಗುವುದಿಲ್ಲ. ಕೂಡಲೇ ಸರ್ಕಾರ ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹತ್ಯೆಕೋರರನ್ನು ಗಲ್ಲಿಗೇರಿಸಬೇಕು. ಈ ಮೂಲಕ ಸರ್ಕಾರ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಮುಂದಾಗಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಜಿ.ಕೆ. ಶ್ರೀನಿವಾಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

(Visited 2 times, 1 visits today)