ತುಮಕೂರು:
ಎಲ್ಲಿ ಶಾಂತಿ ಮತ್ತು ಪ್ರೀತಿ ಇರುತ್ತದೆಯೋ ಅಲ್ಲಿ ಮಾನವ ವಿಕಾಸದ ಜಗತ್ತಿನ ಉಳಿವು ಇರುತ್ತದೆ ಎಲ್ಲಿ ಧ್ವೇಷ ಅಸೂಯೆ ಇರುತ್ತದೆಯೋ ಅಲ್ಲಿ ಜಗತ್ತಿನ ನಾಶ ಮತ್ತು ಮಾನವ ವಿಕಾಸದ ನಾಶವಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಪ್ರೊ ಕೆ. ದೊರೈರಾಜ್ ಹೇಳಿದರು
ತುಮಕೂರಿನ ಎನ್.ಆರ್ ಕಾಲೋನಿ ದಲಿತ ಮತ್ತು ಕೋತಿ ತೋಪು ಮದೀನ ಮಹೊಲ್ಲ ಮುಸ್ಲಿಂ ಸೌಹಾರ್ದ ಸಮಿತಿಯಿಂದ ರಂಜಾನ್ ಹಬ್ಬದ ಅಂಗವಾಗಿ ದಲಿತರಿಂದ ಮುಸ್ಲಿಂ ಬಾಂಧವರಿಗೆ ಸಮುದಾಯ ಶೈಕ್ಷಣಿಕ ಭವನದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಭಾಷಣ ಮಾಡಿದ ಕೆ.ದೊರೈರಾಜ್ ಮನುಷ್ಯ ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಬದುಕುವಂತಾಗಬೇಕು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ ಸರಿಯಲ್ಲ. ರಂಜಾನ್ ಉಪವಾಸ ಮನುಷ್ಯನಲ್ಲಿರುವ ಕ್ರೌರ್ಯವನ್ನು ದಹಿಸಿ ಹಸಿವಿನ ಅನುಭವವನ್ನು ಕಲಿಸುವುದರಿಂದ ಸಮಾಜದಲ್ಲಿ ಸೌಹಾರ್ಧಯುತವಾಗಿ ಬದುಕುವ ಸಂದೇಶ ನೀಡುತ್ತದೆ ಸಮಾಜದಲ್ಲಿರುವ ಅಶಕ್ತರನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ ಎಂದರು.
ಪ್ರತಿಕೋದ್ಯಮಿ ಎಸ್.ನಾಗಣ್ಣ ಮಾತನಾಡಿ ಎನ್.ಆರ್ ಕಾಲೋನಿಯ ದಲಿತ ಮುಖಂಡರು ಇಫ್ತಾರ್ ಕೂಟ ಮಾಡುತ್ತಿರುವುದು ರಚನಾತ್ಮಕವಾದ ಕೆಲಸ ಶಾಂತಿ ಮತ್ತು ಪ್ರೀತಿ ಮನುಷ್ಯನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ, ದೇಶದಲ್ಲಿರುವ ನಿರ್ಮಾಣವಾಗುತ್ತಿರುವ ದ್ವೇಷ ಮತ್ತು ಅಸೂಯೆಯನ್ನು ಎದುರಿಸಲು ಇಂತಹ ಸೌಹಾರ್ದ ಕೂಟಗಳು ಪ್ರತೀಕೇರಿ ಮತ್ತು ಮೊಹಲ್ಲಗಳಲ್ಲಿ ಆಗಬೇಕು ಹಿಂದು ಮುಸ್ಲಿಂ, ಕ್ರೈಸ್ತ, ದಲಿತ ಎಲ್ಲರೂ ಭಾರತೀಯರೇ ಒಳ್ಳೆಯ ಕೆಲಸಗಳನ್ನು ನಾಗರೀಕ ಸಮಾಜ ಗೌರವಿಸಬೇಕೆಂದರು,
ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್ ಮಾತನಾಡಿ ಕೆಲವೇ ಸಂಘಟನೆಗಳ ಕೆಲವು ಜನರು ಮನುಷ್ಯ ವಿರೋಧಿಯಾಗಿ ನಡೆಯುತ್ತಿದ್ದಾರೆ ಯಾವ ಧರ್ಮ ಮನುಷ್ಯನನ್ನು ಕೊಲ್ಲಲು ಹೇಳುವುದಿಲ್ಲ ಹಿಂದು, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಮನುಷ್ಯತ್ವವನ್ನು ಸಾರುತ್ತವೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ದೇಶ ಕಟ್ಟುವ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಈ ಭಾಗದ ದಲಿತರು ಮುಸ್ಲಿಂ ಭಾಂದವರಿಗೆ ನೀಡುತ್ತಿರುವ ಇಫ್ತಾರ್ ಸೋದರತೆಯ ಭಾಗವಾಗಿದೆ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾಹಿತಿಗಳಾದ ಮುನೀರ್ ಅಹ್ಮದ್ ಮಾತನಾಡಿ ನಮಗೆ ದಲಿತರು ನೀಡಿದ ಔತಣದಿಂದ ಹಿಂದೆ ರಂಜಾನ್ ಹಬ್ಬ ಆಚರಿಸಿದಂತೆ ಆಗಿದೆ ಸಮಾಜದಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸಿದ್ದಲ್ಲಿ ನೆಮ್ಮದಿಯ ಬದುಕು ಸಾಧ್ಯ ಎಂದರು.
ಇಫ್ತಾರ್ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸದ ಹಿರಿಯ ಮುಖಂಡರಾದ ನರಸಿಂಹಯ್ಯ ಎನ್.ಆರ್ ಕಾಲೋನಿ ಮತ್ತು ಕೋತಿ ತೋಪಿನಲ್ಲಿರುವ ದಲಿತರು ಹಾಗೂ ಮುಸ್ಲಿಂ ಬಾಂಧವರು ನೂರಾರು ವರ್ಷಗಳಿಂದ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಮತೀಯವಾದಿಗಳಿಗೆ ಇಫ್ತಾರ್ ಕೂಟದಿಂದ ತಕ್ಕ ಉತ್ತರ ನೀಡಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೇಸ್ ರಾಮಕೃಷ್ಣಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಅಲ್ಪಸಂಖ್ಯಾತ ಮುಖಂಡರಾದ ತಾಜುದ್ದೀನ್ ಷರೀಫ್, ಡಾ. ಡಿ.ಮುರುಳಿಧರ್, ನಗರಪಾಲಿಕೆ ಸದಸ್ಯರುಗಳಾದ ರೂಪಶ್ರೀ, ನಯಾಜ್ ಅಹ್ಮದ್, ಇನಾಯತ್ ಉಲ್ಲಾ ಮಾತನಾಡಿ ರಂಜಾನ್ ಹಬ್ಬದ ಸಂದೇಶ ಮತ್ತು ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ. ಸ್ವಾಗತವನ್ನು ಮುತ್ವಲಿ ಸಾವಾಜ್, ವಂದನಾರ್ಪಣೆಯನ್ನು ಅರುಣ್, ಕುರಾನ್ ಪ್ರಾರ್ಥನೆಯನ್ನು ಮಸೂದ್‍ಆಲ್ ಕ್ವಾಸ್ಮಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನರಸೀಯಪ್ಪ. ವಾಲೇಚಂದ್ರಯ್ಯ, ಹೆಚ್.ಆರ್ ಹನುಮಂತರಾಯಪ್ಪ. ಜಯಮೂರ್ತಿ. ಡಾ.ಪವಾನ, ಡಾ, ಸಂತೋಷ್‍ಶೆಟ್ಟಿ ,ಶಿವಕುಮಾರ್, ಬಸವರಾಜ್, ಜೆಡಿಎಸ್ ಚಂದ್ರು, ಎನ್,ಕೆ ಸುಬ್ರಮಣ್ಯ, ಕಲ್ಯಾಣಿ, ಆಶಾದುಲ್ಲಾಖಾನ್, ಈ ಶಿವಣ್ಣ, ಇಮ್ತಿಯಾಜ್ ಅಹ್ಮದ್, ಮೆಹಬೂಬ್‍ಪಾಷಾ. ಬಿ.ಹೆಚ್ ಗಂಗಾಧರ್, ಶೆಟ್ಟಾಳಯ್ಯ, ತಿರುಮಲಯ್ಯ,ಮೋಹನ್,ಕೃಷ್ಣ,ಲೋಕೇಶ್.ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

(Visited 3 times, 1 visits today)