ತುಮಕೂರು :

      ಕೋವಿಡ್-19ರ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಓಟಿಪಿ ಅಥವಾ ಬಯೋಮೆಟ್ರಿಕ್ ತಂಬ್ ಇಂಪ್ರೇಷನ್‍ಗೆ ಕಾಯದೆ ಸಹಿ ಮಾಡಿಸಿಕೊಂಡು ಏಪ್ರಿಲ್ 10ರೊಳಗೆ ಪಡಿತರವನ್ನು ವಿತರಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೂಚನೆ ನೀಡಿದರು.

     ಗುಬ್ಬಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕೋವಿಡ್-19ರ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪಡಿತರ ಚೀಟಿ ಇಲ್ಲದಿದ್ದರೂ ಪಡಿತರ ವಿತರಿಸಬೇಕು. ನ್ಯಾಯ ಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರು ಗುಂಪು ಸೇರದಂತೆ 1 ಮೀಟರ್ ಅಂತರದಲ್ಲಿ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಸೂಚಿಸಿದರು. 

     ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ನೀಡಲಾಗುವ ವಸ್ತುಗಳನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸಿದಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಿಕ್ಕರ್ ಶಾಪ್ ಇರುವ ಕಡೆ ಹೆಚ್ಚಿನ ಗಸ್ತು ಮಾಡಿ ಎಂದು ತಿಳಿಸಿದರು.

      ತರಕಾರಿ/ ಹಣ್ಣುಗಳನ್ನು ರೈತರಿಂದ ಖರೀದಿ ಮಾಡಿ ಹಾಪ್‍ಕಾಮ್ಸ್ ಅಂಗಡಿಗಳ ಮೂಲಕ ಮಾರಬೇಕು. ವ್ಯಾಪಾರಸ್ಥರೊಂದಿಗೆ ರೈತರನ್ನು ಲಿಂಕ್ ಮಾಡಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಇಓಗಳನ್ನು ಸಂಪರ್ಕಿಸಿ ಅವರ ಬಳಿ ಇರುವ ಟಾಟಾ ಎಸಿ ವಾಹನಗಳನ್ನು ಪಡೆದು ಮಾರಾಟ ಮಾಡಲು ಅನುಕೂಲ ಮಾಡಿಕೊಡುವಂತೆ ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಿದರು.

      ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ತೊಂದರೆಯಾಗದಂತೆ ದಿನಸಿ ಅಂಗಡಿಗಳು ತೆರೆಯುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ಜನರಿಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಾಗಬೇಕು ಎಂದರು.

      ಗುಬ್ಬಿಯಲ್ಲಿ ಜನರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಇಲ್ಲಿಯೇ ಜನರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಪ್ರತಿದಿನ ನಾನು ಈ ರಸ್ತೆಯಲ್ಲಿ ಓಡಾಡುತ್ತಿದ್ದೇನೆ ಹೆಚ್ಚಾಗಿ ಜನರು ಓಡಾಡುತ್ತಿದ್ದಾರೆ ಅಂಗಡಿ, ಮೆಡಿಕಲ್‍ಗೆ ಇಬ್ಬರ ಬದಲು ಒಬ್ಬರು ಹೋಗುವಂತೆ ತಿಳಿಸಿ, ನಿಟ್ಟೂರು, ಕೊಂಡ್ಲಿ ಕ್ರಾಸ್ ಮಾರ್ಗವಾಗಿ ಬರುವ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಹೇರಬೇಕು. ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವವರನ್ನು ಬಿಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

      ಶಿರಾದಿಂದ ಗುಬ್ಬಿಯನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿ ಎಂದು ಸೂಚಿಸಿದರು. ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಗತ್ಯವಿರುವ ಕಡೆ ಹೋಮ್ ಡೆಲಿವೆರಿ ನೀಡಿದರೆ ಒಳಿತು ಎಂದು ಅವರು ತಿಳಿಸಿದರು.

      ಪೆಟ್ರೋಲ್ ಬಂಕ್‍ಗಳಲ್ಲಿ ಅಗತ್ಯತೆಯನ್ನು ಅರಿತು ಬೈಕ್‍ಗಳಿಗೆ ಪೆಟ್ರೋಲ್‍ಗಳನ್ನು ಹಾಕಬೇಕು. ಕಾರಣವಿಲ್ಲದೆ ಪೆಟ್ರೋಲ್ ಹಾಕುವುದು ಬೇಡ. ಈ ಬಗ್ಗೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಕೋವಿಡ್-19 ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಯಾವುದೇ ಔಷಧವಿಲ್ಲ. ಇದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಎಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ಸಾಧ್ಯ. ಈ ನಿರ್ಧಾರ ಅನಿವಾರ್ಯವೆಂದು ಮಾನ್ಯ ಪ್ರಧಾನ ಮಂತ್ರಿಗಳು ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಜವಾವ್ದಾರಿಯನ್ನು ಜನರು ಅರ್ಥಮಾಡಿಕೊಂಡು ಹುಡುಗಾಟ ಆಡುವುದಾಗಲಿ ಅಥವಾ ಸ್ವ-ಇಚ್ಛೆಯಿಂದ ಅನಗತ್ಯವಾಗಿ ತಿರುಗಾಡುವುದಾಗಲಿ ಮಾಡಬಾರದು. ಇದರಿಂದ ಕೇವಲ ತಮಗೆ ಮಾತ್ರ ಸಮಸ್ಯೆ ಉಂಟಾಗುವುದಿಲ್ಲ. ಇಡೀ ರಾಷ್ಟ್ರಕ್ಕೆ ಆಪತ್ತು-ವಿಪತ್ತು ಉಂಟಾಗುತ್ತದೆ ಎಂದು ಭಾವಿಸಿ, ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಮನೆಯಲ್ಲಿದ್ದು, ಅನಿವಾರ್ಯವಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡಬೇಕು. ಇದನ್ನು ಯಾರಾದರೂ ನಿರ್ಲಕ್ಷ್ಯಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಯವಿಟ್ಟು ಈ ರೀತಿ ಆಗದಂತೆ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

      ಕೋವಿಡ್-19ರ ನಿಯಂತ್ರಣ ಸಂಬಂಧ ಗುಬ್ಬಿ ತಾಲ್ಲೂಕಿನಲ್ಲಿ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳ ಬಗ್ಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

      ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್, ಡಾ: ಪ್ರದೀಪ್‍ಕುಮಾರ್, ಡಿಹೆಚ್‍ಓ ಡಾ: ಚಂದ್ರಿಕಾ, ಜಿಲ್ಲಾ ಪಂಚಾಯತ್ ಸದಸ್ಯೆ ಡಾ: ನವ್ಯಬಾಬು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(Visited 10 times, 1 visits today)