ತುಮಕೂರು : 

      ತ್ರಿವಿಧ ದಾಸೋಹಿ, ಕಾಯಕಯೋಗಿ, ಶತಮಾನದ ಸಂತ, ನಡೆದಾಡುವ ದೇವರು ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಪುಣ್ಯ ಸ್ಮರಣೆ ದಿನವನ್ನು ದಾಸೋಹದ ದಿನವನ್ನಾಗಿ ಆಚರಿಸಲು ಸರ್ಕಾರದಿಂದ ಆಜ್ಞೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

      ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೂರನ್ನೊಂದು ವರ್ಷಗಳ ಕಾಲ ನಡೆದಾಡುವ ದೇವರೆಂದೇ ಬದುಕಿದ ಶ್ರೀಗಳ ಬದುಕು ಮತ್ತು ವ್ಯಕ್ತಿತ್ವ ಸಾರುವ ಉದ್ದೇಶದಿಂದ ಅವರ ಹುಟ್ಟೂರಾದ ವೀರಾಪುರದಲ್ಲಿ 111 ಅಡಿ ಪುತ್ಥಳಿ ಸ್ಥಾಪನೆಗೆ 80 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 25 ಕೋಟಿ ಬಿಡುಗಡೆ ಮಾಡಲಾಗಿದೆ. ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದು, ಇದಕ್ಕಾಗಿ ಅವಶ್ಯವಕವಿರುವ 10 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿ ಸಿದ್ಧಗಂಗಾ ಮಠದ ಅಭಿವೃದ್ಧಿಗೆ ಸದಾ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಶ್ರೀಮಠಕ್ಕೆ ಭೇಟಿ ನೀಡಿದ ಪ್ರತಿ ಸಂದರ್ಭದಲ್ಲಿಯೂ ನನಗೆ ಮಾರ್ಗದರ್ಶನ ಮಾಡುತ್ತಿದ್ದ ಶ್ರೀಗಳು ನಾನು ದಾಹೋಹ ಮಾಡದೇ ವಾಪಾಸಾಗಲು ಬಿಡುತ್ತಿರಲಿಲ್ಲ. ಧರ್ಮ, ಜಾತಿ ಭೇದವಿಲ್ಲದೇ ಕಾಯಕ ಮಾಡಿದ ಶ್ರೀಗಳು ಬಸವಣ್ಣ ಅವರ ತತ್ವಗಳನ್ನು ಅನುಸರಿಸಿ ಧಾರ್ಮಿಕ ಸಂಸ್ಥೆಗಳ ಮಾನವೀಯ ಮುಖವನ್ನು ಜಗತ್ತಿಗೆ ತೋರಿಸಿ ನಾಡಿಗೆ ದೇವರಾಗಿದ್ದಾರೆ ಎಂದರು. ಶ್ರೀಗಳು ಭೌತಿಕವಾಗಿ ದೂರವಾಗಿದ್ದರೂ ಅವರ ಕಾಯಕದ ಮೂಲಕ ವೀರಾಜಮಾನ, ವಿಶ್ವಮಾನವರಾಗಿ ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿ ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ. ಸರ್ವಧರ್ಮಿಯರಿಗೂ ಶಿಕ್ಷಣ, ವಸತಿ ಒದಗಿಸಿ ವಿಶ್ವಮನ್ನಣೆ ಪಡೆದಿದ್ದಾರೆ ಎಂದು ನುಡಿದರು.

ನನ್ನ ಬದುಕಿನ ಕೊನೆ ಉಸಿರು ಇರುವವರೆಗೂ ಶ್ರೀ ಕ್ಷೇತ್ರದ ಅಭಿವೃದ್ಧಿಯೇ ನನ್ನ ಆದ್ಯತೆಯಾಗಿದೆ. ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕಮಾರ ಸ್ವಾಮೀಜಿಗಳ ಸ್ಮರಣೆ ಮಾಡಿಕೊಂಡು ಪ್ರತಿನಿತ್ಯ ನನ್ನ ದಿನಚರಿಯನ್ನು ಆರಂಭಿಸುತ್ತೇನೆ ಎಂದು ಅವರು ತಿಳಿಸಿದರು.

      ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಮಾತನಾಡಿ, ತ್ರಿವಿಧ ದಾಸೋಹ ಕಾಯಕ ಮಾಡಿರುವ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ. ಮಠದಲ್ಲಿ ಸಂಸ್ಕøತವನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸಿರುವುದು ಉತ್ತಮ ಬೆಳವಣಿಗೆ. ಅದು ಒಂದು ಭಾಷೆಯಲ್ಲ, ನಮ್ಮ ಜಾಗತಿಕ ಸಂಸ್ಕøತಿಯಾಗಿದೆ. ಇಂತಹ ದೇವವಾಣಿ ಸಂಸ್ಕøತವನ್ನು ಶ್ರೀಗಳು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಭಾರತದ ಸಂಸ್ಕøತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

      ಜೀವನದಲ್ಲಿ ದೇವರು ಮತ್ತು ಭಕ್ತಿ ಮುಖ್ಯವಾಗಿದ್ದು, ಬಡತನ, ಅನರಕ್ಷತನದಿಂದ ವಿಮುಕ್ತರಾಗಲು ಹೋರಾಡುತ್ತೇವೆ. ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಇರುತ್ತಿತ್ತು ಅಂತಹ ಶಿಸ್ತು ಸಿದ್ಧಗಂಗಾ ಗುರುಕುಲದಲ್ಲಿ ಕಾಣಬಹುದಾಗಿದೆ. ಪ್ರಾಚೀನ ಭಾರತದಲ್ಲಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ನಮ್ಮ ತಕ್ಷಶೀಲಾ, ಉಜ್ಜೈಯನಿ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬರುತ್ತಿದ್ದರು, ಕಾಲ ಕ್ರಮೇಣ ಅದು ಕಡಿಮೆಯಾಯಿತು ಅದನ್ನು ಭಾರತದ ಸಾಧು ಸಂತರು ಪುನರ್ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಮಾನ್ಯ ಪ್ರಧಾನ ಮಂತ್ರಿ ಪ್ರಧಾನಿ ಮೋದಿ ಅವರು ಆತ್ಮ ನಿರ್ಭರ ಭಾರತದ ಮೂಲಕ ಸ್ವದೇಶಿ ಉತ್ಪನ್ನಕ್ಕೆ ಒತ್ತು ನೀಡಿದ್ದು, ನಮ್ಮಲ್ಲಿರುವ ಜ್ಞಾನವನ್ನು ಬಳಸಿ ಉತ್ಪಾದಿಸುವ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಗುರುಕುಲದಲ್ಲಿ ಕಲಿತ ಜ್ಞಾನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆತ್ಮನಿರ್ಭರದ ಮೂಲಕ ಅದ್ಭುತಗಳನ್ನು ಭಾರತ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮರ್ಥ ವ್ಯಕ್ತಿತ್ವ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಅವರ ಆಶಯವನ್ನು ಈಡೇರಿಸುವಂತಹ ಪಠ್ಯವನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸುವ ಮೂಲಕ ಶ್ರೀಗಳ ನಾಡನ್ನು ದೇಶದಲ್ಲಿಯೇ ಉತ್ತಮ ರಾಜ್ಯವನ್ನಾಗಿಸಲಾಗುವುದು ಎಂದು ಹೇಳಿದರು.

ಶ್ರೀಗಳು ಬದುಕಿದ್ದ ಅನುಕ್ಷಣ ಸಾರ್ಥಕ ಬದುಕು ಬದುಕಿದ್ದು, ಅವರ ಕಾಯಕ ಸದಾ ಸ್ಪೂರ್ತಿಯಾಗಿವೆ. ತ್ರಿವಿಧ ದಾಸೋಹ ಸಿದ್ದಗಂಗಾ ತಪೋವನದಲ್ಲಿ ಬೆಳಗಿದ ವಿದ್ಯಾರ್ಥಿಗಳು ಇಡೀ ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು. ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಾತನಾಡಿ, ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಭಕ್ತರಿಗೆ ನೋಡುವ ಭಾಗ್ಯವಿತ್ತು. ಎರಡು ವರ್ಷದ ನಂತರ ಅವರ ಸ್ಮರಣೆಯೇ ದರ್ಶನವಾಗಿದೆ. ಶ್ರೀಗಳನ್ನು ಪಡೆದ ಈ ನಾಡೇ ಪುಣ್ಯ ಎನ್ನುವ ಭಾವನೆ ಭಕ್ತಗಣದಲ್ಲಿದೆ ಎಂದು ಹೇಳಿದರು.

ಪರೋಪಕಾರಕ್ಕಾಗಿ ಭಗವಂತ ಸೃಷ್ಟಿಸಿದವರಲ್ಲಿ ಶ್ರೀಗಳು ಒಬ್ಬರು. ಅವರು ತನು, ಮನ, ಧನವನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಂಡು ಕರ್ಪೂರ ತನ್ನ ಸುಟ್ಟುಕೊಂಡು ಬೆಳಕು ನೀಡಿದಂತೆ ಶ್ರೀಗಳು ಕಾಯಕದ ಮೂಲಕ ತಮ್ಮನ್ನು ಸುಟ್ಟುಕೊಂಡು ನಾಡಿಗೆ ಬೆಳಕು ನೀಡಿದ್ದಾರೆ. ಆತ್ಮನಿರ್ಬರ ಭಾರತವನ್ನು 12ನೇ ಶತಮಾನದಲ್ಲಿಯೇ ಬಸವಣ್ಣನವರು ನೀಡಿದ್ದರು, ಸಮಾಜ ಮತ್ತು ವ್ಯಕ್ತಿ ಉತ್ತಮವಾಗಲು ಕಾಯಕ ನಿಷ್ಠರಾಗಬೇಕೆಂದು ಹೇಳಿದ್ದರು. ಅದರಂತೆ ಶ್ರೀಗಳು ಬದುಕಿದ್ದಾರೆ. ಕಾಯವೂ ಕೈಲಾಸ, ಕಾಯಕವೂ ಕೈಲಾಸ ಎನ್ನುವುದನ್ನು ಶ್ರೀಗಳಲ್ಲಿ ಕಾಣಬಹುದಿತ್ತು ಎಂದು ಹೇಳಿದರು. ಗಾಮೀಣ ಮಕ್ಕಳು ಉದ್ಧಾರವಾಗಬೇಕೆಂದು ಮಕ್ಕಳಿಗೆ ಶಿಕ್ಷಣ ನೀಡಿದರು, ಮಠಕ್ಕೆ ಆಗಮಿಸುವ ಮಕ್ಕಳಿಗೆ ಯಾವ ಕಾರಣಕ್ಕೂ ಅವಕಾಶವನ್ನು ನಿರಾಕರಿಸಲಿಲ್ಲ. ಎಲ್ಲರಿಗೂ ಆದರ್ಶ ಪೂರ್ಣ ಜೀವನವನ್ನು ನೀಡಿದ್ದಾರೆ. 111 ವರ್ಷಗಳ ಕಾಲ ವಿಶ್ವಕ್ಕೆ ಚೇತನರಾಗಿ ಬುದುಕಿರುವ ಶ್ರೀಗಳಿಗೆ ಮಕ್ಕಳು, ದನ-ಕರುಗಳೆಂದರೆ ಬಲು ಪ್ರೀತಿ. ಮಠದಲ್ಲಿ ವಿದ್ಯಾರ್ಥಿಗಳು ಮತ್ತು ದನ-ಕರುಗಳು ಓಡಾಡುತ್ತಿದ್ದರೆ ಅವರು ಖುಷಿಯಾಗಿರುತ್ತಿದ್ದರು ಎಂದು ನುಡಿದರು.

      ಪಂಚಮಸಾಲಿ ಮಠದ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಮಾತನಾಡಿ, ಶ್ರೀಗಳ ಲಿಂಗೈಕ್ಯವಾದ ದಿನವನ್ನು ದಾಸೋಹ ದಿನವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿದರು.

      ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಸರ್ಕಾರ ಯೋಜಿಸಿರುವ ಸ್ವಾಮೀಜಿಯವರ 111 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಮತ್ತು ಗ್ರಾಮದ ಅಭಿವೃದ್ಧಿ ಕುರಿತ 3ಡಿ ವಿಡಿಯೋ ಬಿಡುಗಡೆ ಮಾಡಿದರು.

      ವೇದಿಕೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜಯರಾಂ, ರಾಜೇಶ್‍ಗೌಡ, ಚಿದಾನಂದಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಹುಲಿನಾಯ್ಕರ್, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ಕ್ರೇಡಲ್ ಅಧ್ಯಕ್ಷ ರುದ್ರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‍ಗೌಡ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಸೇರಿದಂತೆ ವಿವಿಧ ಗಣ್ಯರು, ವಿವಿಧ ಮಠಗಳ ಮಠಾಧೀಶರು ಇದ್ದರು.

(Visited 13 times, 1 visits today)