ತುಮಕೂರು: 

      ಜಿಲ್ಲಾ ಪೊಲೀಸ್ ಕಛೇರಿಯ ಅಕೌಂಟ್ಸ್ ಕೇಸ್ ವರ್ಕರ್ ಯಶಸ್ವಿನಿಯವರನ್ನು ಮಂಗಳವಾರ ರಾತ್ರಿ ಕರ್ತವ್ಯ ದುರುಪಯೋಗ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

      ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯಶಸ್ವಿನಿ ಎಂಬುವವರ ಮೇಲೆ ಕರ್ತವ್ಯ ದ್ರೋಹ ಮತ್ತು ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವಾಗಿ ತುಮಕೂರು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರು ದಾಖಲು ಮಾಡುವ ಮುನ್ನವೇ ಆಕೆಯ ಕರ್ತವ್ಯ ದುರಪಯೋಗದ ಆಧಾರದ ಮೇಲೆ ಅಮಾನತ್ತು ಮಾಡಲಾಗಿತ್ತು. ದೂರು ದಾಖಲಾದ ನಂತರ ಪ್ರಕರಣದ ತನಿಖೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಆರ್‍ಬಿ ಇನ್ಸ್‍ಪೆಕ್ಟರ್ ವಿಜಯಕುಮಾರ್‍ರವರಿಗೆ ತನಿಖೆ ಮಾಡಲು ಮತ್ತು ಆರೋಪಿಗಳನ್ನ ಬಂಧಿಸಲು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಷೇಶವಾಗಿ ಆದೇಶ ನೀಡಿದ್ದರು. ಇನ್ಸ್‍ಪೆಕ್ಟರ್ ವಿಜಯಕುಮಾರ್‍ರವರು ಲಿಂಗಾಯತ ಸಮುದಾಯಕ್ಕೆ ಸೇರಿದವರೆನ್ನುವುದು ಇಲ್ಲಿ ಗಮನಿಸಬೇಕಾದಂತಹ ವಿಚಾರವಾಗಿರುತ್ತದೆ. ಸದರಿ ಪ್ರಕರಣ ದಾಖಲಾಗಿ ಸುಮಾರು ದಿನಗಳೇ ಕಳೆದಿದ್ದು, ಆರೋಪಿ ಸ್ಥಾನದಲ್ಲಿದ್ದ ಯಶಸ್ವಿನಿಯನ್ನು ಬಂಧಿಸದೆ ಮೀನಾಮೀಷ ಎಣಿಸುತ್ತಿದ್ದ ಇನ್ಸ್‍ಪೆಕ್ಟರ್ ವಿಜಯಕುಮಾರ್ ಕೇವಲ ಕಣ್ಣೊರೆಸುವ ತಂತ್ರಕ್ಕಾಗಿ ಯಶಸ್ವಿನಿಯವರ ಭಾವನನ್ನು ಬಂಧಿಸಿ ಜೈಲಿಗೆ ಕಳುಹಿಸುವ ಮುಖೇನ ಮಾಧ್ಯಮದವರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದ್ದರು. ಸದರಿ ಪ್ರಕರಣವನ್ನ ಜಿಲ್ಲಾ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು. ಇನ್ಸ್‍ಪೆಕ್ಟರ್ ವಿಜಯಕುಮಾರ್ ಜಿಲ್ಲಾ ಪೊಲೀಸ್ ಕಛೇರಿಯಿಂದ ಬೇರೆ ಸ್ಥಳಕ್ಕೆ ವರ್ಗಾಣೆಯಾದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಕರ್ತವ್ಯದಿಂದ ಬಿಡುಗಡೆಗೊಂಡ ನಂತರ ಮಂಗಳವಾರ ಸಂಜೆ ದಿಢೀರನೆ ಆರೋಪಿಯಾಗಿದ್ದ ಯಶಸ್ವಿನಿಯನ್ನ ತನ್ನ ಕರ್ತವ್ಯದ ವ್ಯಾಪ್ತಿ ಮೀರಿ ಬಂಧಿಸಿ ಕರೆತಂದು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿರುತ್ತಾರೆ. ನಂತರ ಯಶಸ್ವಿನಿಯವರನ್ನ ಮಂಗಳವಾರ ರಾತ್ರಿ ಜಿಲ್ಲಾ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಬಿಟ್ಟು ಬುಧವಾರ ಉಪ ಪೊಲೀಸ್ ಠಾಣೆಯಲ್ಲಿ (ಓಪಿ) ರಹಸ್ಯವಾಗಿ ತನಿಖೆ ಮಾಡಿರುತ್ತಾರೆ.

      ಸದರಿ ಪ್ರಕರಣದಲ್ಲಿ ಯಶಸ್ವಿನಿ ವಿಷಯ ನಿರ್ವಾಹಕರಾಗುವ ಹಿಂದೆ ಪುಟ್ಟಾರಾಧ್ಯರವರು ಟಿಎ/ಡಿಎ ಬಿಲ್‍ನ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹ ವಿಚಾರ. ಕೃಷ್ಣಪ್ಪನವರು ಬಹಳಷ್ಟು ವರ್ಷಗಳಿಂದ ಜಿಹೆಚ್‍ಎ ಆಗಿ ಎಲ್ಲಾ ಹಣಕಾಸು ವ್ಯವಹಾರಗಳ ವರ್ಗಾವಣೆಗೆ ಸಹಿ ಹಾಕುತ್ತಿದ್ದರು. ಹೀಗಿರುವಾಗ ಬಹಳಷ್ಟು ವರ್ಷಗಳಿಂದಲೂ ಈ ಅವ್ಯವಹಾರ ನಿರಂತರವಾಗಿ ಸಾಗುತ್ತಲೇ ಬಂದಿದೆ. ಹಾಲಿ ವಿಷಯ ನಿರ್ವಾಹಕಿ ಯಶಸ್ವಿನಿಯವರ ಮೇಲೆ ಜಿಲ್ಲಾ ಪೊಲೀಸ್ ಕಚೇರಿಯ ಪರವಾಗಿ ದೂರು ನೀಡಿರುವುದು ಈ ಪ್ರಕರಣದ ಆರೋಪಿಯಾಗಬೇಕಿದ್ದ ಜಿಹೆಚ್‍ಎ ಕೃಷ್ಣಪ್ಪನವರು ತನ್ನ ರಕ್ಷಣೆ ಮತ್ತು ತನ್ನ ಕೈಕೆಳಗೆ ಅಕೌಂಟ್ ಸೂಪರಿಂಡೆಂಟ್ ಆಗಿರುವ ಪುಟ್ಟಾರಾಧ್ಯರವರ ರಕ್ಷಣೆಯ ಸಲುವಾಗಿ ಯಶಸ್ವಿನಿಯವರೊಬ್ಬರ ಮೇಲೆ ದೂರು ನೀಡಿರುತ್ತಾರೆ.

      ಯಶಸ್ವಿನಿಯವರ ಅವಧಿಯಲ್ಲಿ ಆದ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ಪುಟ್ಟಾರಾಧ್ಯ ಟಿಎ/ಡಿಎ ವಿಷಯ ನಿರ್ವಾಹಕರಾಗಿದ್ದ ಸಂದರ್ಭದಲ್ಲೂ ಇದೇ ರೀತಿಯ ಅವ್ಯವಹಾರಗಳು ನಡೆದಿವೆ ಎನ್ನಲಾಗಿದೆ. ಪುಟ್ಟಾರಾಧ್ಯ ಮತ್ತು ಜಿಹೆಚ್‍ಎ ಕೃಷ್ಣಪ್ಪನವರು ಲಿಂಗಾಯಿತರೆನ್ನುವ ಬಹುಮುಖ್ಯ ಕಾರಣದಿಂದ ಇಲ್ಲಿಯ ಪ್ರಭಾವಿ ಹಾಲಿ ಮತ್ತು ಮಾಜಿ ರಾಜಕಾರಣಿಗಳು, ಹಾಲಿ ಮತ್ತು ಮಾಜಿ ನಿವೃತ್ತ ಪೊಲೀಸ್ ಅಧಿಕಾರಿಗಳು(ಕೆಎಎಸ್ ಮತ್ತು ಐಪಿಎಸ್) ಲಿಂಗಾಯಿತ ಅಧಿಕಾರಿಗಳ ಪರವಾಗಿ ಬೆಂಬಲಕ್ಕೆ ನಿಂತಿದ್ದಾರೆ. ಈ ಕಾರಣದಿಂದಲೇ ಸದರಿ ಪ್ರಕರಣವನ್ನ ಲಿಂಗಾಯತ ಸಮುದಾಯದ ವಿಜಯಕುಮಾರ್‍ರವರಿಗೆ ತನಿಖೆಗಾಗಿ ಒಪ್ಪಿಸಲಾಗಿತ್ತು. ಈ ಪ್ರಕರಣ ಕೂಲಂಕುಶವಾಗಿ ತನಿಖೆಯಾದರೆ ಕರ್ತವ್ಯ ದುರಪಯೋಗದ ಆಧಾರದಡಿ ಯಶಸ್ವಿನಿ ಜೊತೆಯಲ್ಲಿ ಪುಟ್ಟಾರಾಧ್ಯ ಮತ್ತು ಕೃಷ್ಣಪ್ಪ ಜೈಲಿನಲ್ಲಿ ಮುದ್ದೆ ಮುರಿಯುವುದು ಗ್ಯಾರೆಂಟಿ ಎನ್ನುವ ಮಾತುಗಳು ಪೊಲೀಸ್ ವಲಯದಿಂದಲೇ ಕೇಳಿಬರುತ್ತವೆ.

      ಈ ಪ್ರಕರಣ ಡಿಸಿಬಿ(ಡಿಸ್ಟ್ರಿಕ್ ಕ್ರೈಂ ಬ್ರಾಂಚ್) ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಅಲ್ಲಿಯ ಇನ್ಸ್‍ಪೆಕ್ಟರ್ ಶೇಷಾದ್ರಿರವರು ಪಾರದರ್ಶಕ ತನಿಖೆ ಮಾಡಿ ಉಳಿದ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎನ್ನುವ ನಂಬಿಕೆ ಪೊಲೀಸ್ ಇಲಾಖೆಗಿದೆ.

 

ಟಿಎ/ಡಿಎ ಬಿಲ್‍ನ ಹಗರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಕಛೇರಿಗೆ ಅಕೌಂಟ್ ಕೇಸ್ ವರ್ಕರ್ ಯಶಸ್ವಿನಿ, ಅಕೌಂಟ್ ಸೂಪರಿಂಡೆಂಟ್ ಪುಟ್ಟಾರಾಧ್ಯ, ಜಿಹೆಚ್‍ಎ ಕೃಷ್ಣಪ್ಪ ಈ ಮೂವರ ವಿರುದ್ಧ ದೂರು ನೀಡಲಾಗಿದ್ದು, ಈ ಮೂವರ ವಿರುದ್ಧ ತನಿಖೆ ಆರಂಭವಾಗಿರುತ್ತದೆ. ಯಶಸ್ವಿನಿರವರ ಬಗ್ಗೆ ಎಸ್‍ಪಿ ಕಛೇರಿಗೆ, ಅಕೌಂಟ್ ಸೂಪರಿಂಡೆಂಟ್ ಪುಟ್ಟಾರಾಧ್ಯ ಬಗ್ಗೆ ಐಜಿಪಿ ಕಛೇರಿಗೆ, ಜಿಹೆಚ್‍ಎ ಕೃಷ್ಣಪ್ಪನವರ ಬಗ್ಗೆ ಡಿಜಿಪಿ ಕಛೇರಿಗೆ ತನಿಖೆಗೆ ಅನುಮತಿ ಕೋರಿ ಎಸಿಬಿ ಕೇಂದ್ರ ಕಚೇರಿಯಿಂದ ಪತ್ರಗಳು ರವಾನೆಯಾಗಿರುತ್ತದೆ. ಇದನ್ನು ಗಮನಿಸಿದರೆ ಸದರಿ ಪ್ರಕರಣದಲ್ಲಿ ಆರೋಪಿಗಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆಯಲ್ಲವೇ.

(Visited 3,793 times, 1 visits today)