ತುಮಕೂರು:

 

        ಸರ್ಕಾರದ ಹೊಸ ಆದೇಶದಂತೆ ಜಿಲ್ಲೆಯಲ್ಲಿ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಓಡಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಅವರು ಮನವಿ ಮಾಡಿದ್ದಾರೆ.

       ನಗರದ ಜೆ.ಸಿ.ಆರ್ ಕಾಲೋನಿಯಲ್ಲಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಅಗತ್ಯವಿದ್ದರೆ ಮಾತ್ರ ಬೈಕ್‍ಗಳಲ್ಲಿ ಇಬ್ಬರ ಬದಲು ಒಬ್ಬರು ಹೋಗಬೇಕು. ದ್ವಿಚಕ್ರ ವಾಹನಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ 2500 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮ ಆಗುವಷ್ಟು ಖರೀದಿಸಿ, ಹತ್ತಿರವಿರುವ ಅಂಗಡಿಗಳಿಗೆ ನಡೆದುಕೊಂಡು ಹೋಗಿ ತೆಗೆದುಕೊಂಡರೆ, ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬಹುದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಗೆ ಕೊರೊನಾ ಬರದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಿಯಮ ಪಾಲನೆ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಈಗಾಗಲೇ ಸುಮಾರು 150 ಪ್ರಕರಣ ದಾಖಲಾಗಿವೆ. ನಿಯಮ ಉಲ್ಲಂಘನೆ ಮಾಡಿದರೆ 1-2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು. ಇಲ್ಲವಾದರೆ ಎಫ್‍ಐಆರ್ ದಾಖಲು ಮಾಡಲಾಗುವುದು. ಟ್ರೋನ್ ಕ್ಯಾಮೆರಾ ಹಾಗೂ ಅಧಿಕಾರಿಗಳು ಗಸ್ತು ಮಾಡುತ್ತಿದ್ದಾರೆ ಎಂದರು.

      ಸಾರ್ವಜನಿಕರು ಭಯಪಡದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು, ಜ್ವರ, ಕೆಮ್ಮು, ನೆಗಡಿ ಪೀಡಿತರು ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಬೇಕು. ವಿದೇಶ ಅಥವಾ ಬೇರೆ ಜಿಲ್ಲೆಗಳಿಂದ ಯಾರದರೂ ಬಂದಿದ್ದರೆ ಅವರ ಮಾಹಿತಿಯನ್ನು ಟಾಸ್ಕ್‍ಪೋರ್ಸ್‍ಗೆ ತಿಳಿಸಬೇಕು ಎಂದರು.

      ನಗರದ ಟೌನ್‍ಹಾಲ್ ವೃತ್ತದಿಂದ ಪಥಸಂಚಲನದಲ್ಲಿ ಆರಂಭವಾಗಿ ಬಿ.ಹೆಚ್ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಜೆ.ಸಿ.ಆರ್ ಕಾಲೋನಿ, ಗುಬ್ಬಿ ಗೇಟ್, ಬಿ.ಜಿ ಪಾಳ್ಯ ಸರ್ಕಲ್, ಸುಬ್ರಮಣ್ಯ ದೇವಾಲಯದ ರಸ್ತೆ, ಈದ್ಗಾಮೊಲ್ಲ ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಸಾಗಿತು.

     ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

      ಈ ಸಂದರ್ಭದಲ್ಲಿ ಮೇಯರ್ ಫರೀದಾಬೇಗಂ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಆರೋಗ್ಯಾಧಿಕಾರಿ ಡಾ|| ನಾಗೇಶ್‍ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ನವೀನ್, ಪಾರ್ವತಮ್ಮ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

(Visited 11 times, 1 visits today)