ತುಮಕೂರು:


ಮೊಸರಲ್ಲಿ ಕಲ್ಲು ಹುಡುಕುವುದು, ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸ. ಪಠ್ಯ ಪುಸ್ತಕಗಳ ಪರಿಷ್ಕರಣೆ ವಿಚಾರದಲ್ಲಿ ನೂರಕ್ಕೆ ನೂರರಷ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕುವುದೇ ಕಾಯಕವಾಗಿದೆ. ಅವರಿಗೆ ಬೇರೆ ಕೆಲಸ ಇಲ್ಲ. ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಅವರು ನೋಡುವುದೇ ಇಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಮಾಯಸಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಠ್ಯ ಪುಸ್ತವನ್ನು ಇನ್ನು ಯಾರು ಓದೇ ಇಲ್ಲ. ಆದರೂ ಕುವೆಂಪು ರವರ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ಸದ್ದು ಮಾಡುತ್ತಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕುವೆಂಪು ಅವರ ವಿಚಾರಕ್ಕೆ ಸಂಬಂಧ ಪಟ್ಟ ಪಠ್ಯವನ್ನು 8 ಪ್ಯಾರಕ್ಕೆ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಸರ್ಕಾರ ಬಂದ ಅದರಲ್ಲಿ ಒಂದು ಪ್ಯಾರ ಕಡಿತ ಮಾಡಿ 7 ಪ್ಯಾರಕ್ಕೆ ಇಳಿಸಿದ್ದರು. ಆದರೆ ಮತ್ತೆ ಬಿಜೆಪಿಯ ಬಿ.ಸಿ. ನಾಗೇಶ್ ಶಿಕ್ಷಣ ಸಚಿವರಾದ ಮೇಲೆ ಕುವೆಂಪುರವರ ಪಠ್ಯವನ್ನು 10 ಪ್ಯಾರಕ್ಕೆ ಹೆಚ್ಚಿಸಿದ್ದೇವೆ. ಇದು ಯಾರಿಗೂ ಗೊತ್ತೇ ಇಲ್ಲ, ಈ ಬಗ್ಗೆ ಯಾರು ಮಾತನಾಡುತ್ತಲೇ ಇಲ್ಲ ಎಂದರು.
ನಾಡಪ್ರಭು ಕೆಂಪೇಗೌಡರ ಬಗ್ಗೆ ಒಂದು ಅಧ್ಯಾಯ ಇರಲಿಲ್ಲ. ಬೆಂಗಳೂರು-ಮೈಸೂರು ಹೆಸರು ಬಂದ ತಕ್ಷಣ ಟಿಪ್ಪು ಹೆಸರು ತೋರಿಸುತ್ತಿದ್ದರು. ಟಿಪ್ಪು ಅವರೇನು ಕನ್ನಡದವರಾ, ಅವರು ಪರ್ಶಿಯನ್, ಉರ್ದು ಭಾಷೆಯವರು. ಅವರ ಕತ್ತಿ ಮೇಲೂ ಉರ್ದು ಭಾಷೆಯಲ್ಲಿ ಬರೆದುಕೊಂಡಿದ್ದರು. ಆದರೂ ಅವರನ್ನು ವೈಭವೀಕರಿಸುವ ಕೆಲಸ ಮಾಡಿದ್ದರು. ಆದರೆ ಮೊದಲ ಬಾರಿಗೆ ನಾಗೇಶ್ ಅವರು ಶಿಕ್ಷಣ ಸಚಿವರಾದ ನಂತರ ಕೆಂಪೇಗೌಡರ ಹೆಸರನ್ನು ಸೇರಿಸಿದ್ದಾರೆ. ಈ ಬಗ್ಗೆ ಏಕೆ ವಿರೋಧ ಪಕ್ಷದವರು ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಆದ್ದರಿಂದ ಹಳದಿ ಕನ್ನಡಕವನ್ನು ಬಿಟ್ಟು ಬಿಳಿ ಕನ್ನಡಕವನ್ನು ಹಾಕಿಕೊಳ್ಳಬೇಕು ಎಂದು ವಿಪಕ್ಷ ನಾಯಕರ ಹೇಳಿಕೆಗಳಿಗೆ ತಿರಗೇಟು ನೀಡಿದ ಸಚಿವ ಅಶೋಕ್, ಬಿಳಿ ಕನ್ನಡಕ ಹಾಕಿಕೊಂಡಾಗ ಎಲ್ಲ ಸತ್ಯ ಕಾಣುತ್ತದೆ. ತಾವು ಮಾಡಿದ್ದೆಲ್ಲ ಸತ್ಯ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಅವರ ಮಂತ್ರಿಗಳಾಗಿ ಕೆಲಸ ಮಾಡಿದಂತಹವರು. ಈಗ ಪಠ್ಯವನ್ನು ಹರಿದು ಹಾಕಿ ಬಿಟ್ಟರೆ ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಹೊಸ ಪಠ್ಯ ಪುಸ್ತಕವನ್ನು ಯಾರು ಓದಿದ್ದಾರೆ ಪ್ರಶ್ನಿಸಿದರು.
ಈ ಹಿಂದೆ ಕಾಗೇರಿ ಅವರು ಶಿಕ್ಷಣ ಮಂತ್ರಿಯಾಗಿದ್ದಾಗ ಯಾವ ರೀತಿ ಪಠ್ಯ ಪುಸ್ತಕ ಇತ್ತು. ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಯಾರ ರೀತಿಯ ಪಠ್ಯ ಪುಸ್ತಕ ಇತ್ತು. ಆ ಬಗ್ಗೆಯೆಲ್ಲಾ ಯಾರೂ ಮಾತನಾಡುತ್ತಿಲ್ಲ.
ಕೇವಲ ಸರ್ಕಾರದ ವಿರುದ್ಧ ಟೀಕೆ ಮಾಡುವುದೇ ಇವರ ಕೆಲಸವಾಗಿದೆ ಎಂದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಠ್ಯ ಪುಸ್ತಕವನ್ನು ಓದಿ, ನಂತರ ಪ್ರತಿಕ್ರಿಯೆ ನೀಡಲಿ. ಯಾರೋ ತಂದು ಕೊಟ್ಟ ಪಠ್ಯವನ್ನು ಹರಿದು ಹಾಕುವುದು ಸರಿಯಿಲ್ಲ ಎಂದು ಡಿಕೆಶಿ ಅವರಿಗೆ ಸಲಹೆ ನೀಡಿದರು.

(Visited 1 times, 1 visits today)