ತುಮಕೂರು:
“ವಿಶ್ವವಿದ್ಯಾನಿಲಯಗಳಲ್ಲಿ ಅನ್ಯೋನ್ಯ ಸಂಬಂಧ ಬೆಳೆಯಬೇಕೆಂದರೆ ಆಡಳಿತ ಸುಧಾರಣೆಗಳು ಆಗಬೇಕು. ವಿಶ್ವವಿದ್ಯಾನಿಲಯದ ಎಲ್ಲರೂ ಜತೆಗೂಡಿ ಅದರ ಅಭಿವೃದ್ಧಿಗೆ ಅಗತ್ಯವಿರುವ ನೀಲನಕ್ಷೆಯನ್ನು ಸಿದ್ದಪಡಿಸಬೇಕು” ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪಿ. ಎಂ. ಹೊನಕೇರಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯವು ಸೋಮವಾರ ಆಯೋಜಿಸಿದ್ದ ಆಡಳಿತ ಸುಧಾರಣೆ ಕುರಿತ ಕಾರ್ಯಗಾರದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಅಭಿವೃದ್ಧಿ ಕೇವಲ ಕುಲಪತಿ, ಕುಲಸಚಿವರಿಂದ ಆಗುವ ಕೆಲಸ ಅಲ್ಲ. ಅದು ಎಲ್ಲರೂ ತೊಡಗಿಸಿಕೊಳ್ಳಬೇಕಾದ ಪ್ರಕ್ರಿಯೆ ಎಂದರು.
ಯಾವುದೇ ವಿಶ್ವವಿದ್ಯಾನಿಲಯದ ಅಭಿವೃದ್ಧಿಯಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ, ಸಿಂಡಿಕೇಟ್‍ನ ಪಾತ್ರ ಬಹುದೊಡ್ಡದು. ಸಿಂಡಿಕೇಟ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ವಿಶ್ವವಿದ್ಯಾನಿಲಯದ ಪ್ರಗತಿಗೆ ಯಾವುದೇ ಅಡ್ಡಿ ಉಂಟಾಗಲಾರದು. ಯಾವುದೇ ಸಮಸ್ಯೆ ಇದ್ದಾಗಲೂ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುವ ವಾತಾವರಣ ಸೃಷ್ಟಿಯಾಗಬೇಕು ಎಂದು ತಿಳಿಸಿದರು.
ಬೆಂಗಳೂರಿನ ಎಂ. ಎಸ್. ರಾಮಯ್ಯ ಸಂಸ್ಥೆಗಳ ನಿಕಟಪೂರ್ವ ಆಡಳಿತಾಧಿಕಾರಿ ಡಾ. ಬೆಟ್ಟೇಗೌಡ ಮಾತನಾಡಿ, ಪ್ರತಿಯೊಬ್ಬರಲ್ಲೂ ಆತ್ಮ ಗೌರವ ಇರಬೇಕು. ಯಾವುದೇ ಒಂದು ಕೆಲಸ ಮಾಡಲು ಸ್ವಯಂ ಶಿಸ್ತು ಮುಖ್ಯ. ತಾವೆಲ್ಲರೂ ಮನಸ್ಸು ಮಾಡಿದರೆ ವಿಶ್ವವಿದ್ಯಾನಿಲಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ (ಪ್ರಭಾರ) ಪ್ರೊ. ಕೇಶವ ಅವರು, ಕಾರ್ಯಗಾರದ ಉದ್ದೇಶ ಆಡಳಿತದಲ್ಲಿ ಸುಧಾರಣೆ, ಕೌಶಲ್ಯ ಅಭಿವೃದ್ಧಿ, ಕಾರ್ಯದಕ್ಷತೆ ಮತ್ತು ಆಧುನಿಕ ಆಡಳಿತಕ್ಕೆ ನಮ್ಮನ್ನು ನಾವು ಒಗ್ಗೂಡಿಸುವಂತಹದ್ದಾಗಿದೆ. ಸುಧಾರಣೆ ಒಂದು ನಿರಂತರ ಪ್ರಕ್ರಿಯೆ. ಇಂತಹ ಕಾರ್ಯಾಗಾರಗಳನ್ನು ಆಗಿಂದಾಗ್ಗೆ ನಡೆಸುವುದರಿಂದ ಆಡಳಿತದಲ್ಲಿ ಶಿಸ್ತು ಹಾಗೂ ಬದ್ಧತೆಯನ್ನು ಹೆಚ್ಚಿಸಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇಂತಹ ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿವೆ. ಆ ಮೂಲಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವವಿದ್ಯಾನಿಲಯದ ಸಮಗ್ರ ಅಭಿವೃದ್ಧಿಯೆಡೆಗೆ ಶ್ರಮಿಸಲಾಗುವುದು ಎಂದರು.
ಹಣಕಾಸು ಅಧಿಕಾರಿ (ಪ್ರಭಾರ) ಪ್ರೊ. ಪಿ. ಪರಮಶಿವಯ್ಯ, ಸಿಂಡಿಕೇಟ್ ಸದಸ್ಯರಾದ ಆರ್.ಕೆ. ಶ್ರೀನಿವಾಸ್, ಪ್ರಸನ್ನ ಕುಮಾರ್, ಟಿ.ಡಿ. ವಿನಯ್, ಟಿ.ಎಸ್. ಸುನಿಲ್ ಪ್ರಸಾದ್, ರಾಜು, ಕಾರ್ಯಾಗಾರದ ಸಂಯೋಜಕರಾದ ಡಾ. ಡಿ. ಸುರೇಶ್, ಉಪಕುಲಸಚಿವೆ ಡಾ. ಮಂಗಳಾಗೌರಿ ಎಂ. ಉಪಸ್ಥಿತರಿದ್ದರು.
ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ.ವಿ ನಿರೂಪಿಸಿದರು. ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ಮೈಸೂರು ವಿವಿ ಸಹಾಯಕ ಕುಲಸಚಿವ ಪ್ರಕಾಶ್ ಬಿ., ಇಂಟರ್‍ನ್ಯಾಶನಲ್ ಕೌನ್ಸಿಲ್ ಫಾರ್ ಡೆವಲಪ್ಮಂಟ್ ರಿಸರ್ಚ್ ನಿರ್ದೇಶಕ ಡಾ. ಎಂ. ಎಸ್. ನರಸಿಂಹನ್, ಮೈಸೂರು ವಿವಿ ಪರೀಕ್ಷಾಂಗ ಉಪಕುಲಸಚಿವ ಕೆ. ಎನ್. ಮಂಜುನಾಥ, ಸಹಾಯಕ ಕುಲಸಚಿವ ಹನುಮಪ್ಪ, ರಾಜೇಶ್ ಶೆಣೈ, ಸಂತೋಷ್ ಅಕ್ಕಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

(Visited 3 times, 1 visits today)