ತುಮಕೂರು:


ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್, ಸ್ಟಾಂಡ್ ಅಪ್, ವೆಂಚರ್ ಕ್ಯಾಪಿಟಲ್ ಫಂಡ್ ಮುಂತಾದ ಯೋಜನೆಗಳ ಸದುಪಯೋಗವನ್ನು ಪಡೆಯುವ ಮೂಲಕ ಶ್ರೇಷ್ಠ ಭಾರತ, ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣ ಮಾಡಲು ಸಂಕಲ್ಪ ತೊಡುವಂತೆ ಹಾಗೂ ಈ ಮೂಲಕ ಉದ್ಯೋಗದ ಹೊಸ ಅವಕಾಶಗಳ ಭರವಸೆಯನ್ನು ಮೂಡಿಸುವಂತೆ ಗೌರಾವಾನ್ವಿತ ರಾಜ್ಯಾಪಾಲರು ಹಾಗೂ ತುಮಕೂರು ವಿ.ವಿ ಕುಲಾಧಿಪತಿಗಳಾದಂತಹ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ 15ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಂತಹ ವಿದ್ಯಾರ್ಥಿಗಳಾದ ನೀವು ಇಂದಿನಿಂದ ಹೊಸ ಸವಾಲಿನ ಪರಿಸರಕ್ಕೆ ಪ್ರವೇಶಿಸಲಿದ್ದೀರಿ. ಈ ವಿಶ್ವವಿದ್ಯಾನಿಲಯದಿಂದ ಗುಣಾತ್ಮಕ ಹಾಗೂ ಗಟ್ಟಿ ಶಿಕ್ಷಣದ ಜ್ಞಾನವನ್ನು ಪಡೆದಂತಹ ನೀವುಗಳು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗುತ್ತೀರ ಎಂಬ ಭರವಸೆ ನನಗಿದೆ ಎಂದು ಶುಭ ಹಾರೈಸಿದರು.
ದೇಶ ಇಂದು 75ನೇ ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ 75 ವರ್ಷದ ಅಮೃತ ಮಹೋತ್ಸವ ಆಚರಣೆಯು ಸ್ವಾತಂತ್ರ್ಯದ ಹಾದಿಯಲ್ಲಿ ಭಾರತೀಯರ ಪರಿಶ್ರಮ, ಹೊಸ ಅನ್ವೇಷಣೆಗಳು ಮತ್ತು ಉದ್ಯಮಶೀಲತೆಯ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಭಾರತದ ‘ಸ್ಟಾರ್ಟ್ ಅಪ್ ಇಕೋ ಸಿಸ್ಟಮ್’ ಯೋಜನೆಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ದೇಶ-ವಿದೇಶಗಳ ವಿವಿಧ ವೇದಿಕೆಗಳಲ್ಲಿ ಭಾರತದ ಕ್ಷಮತೆ ಮತ್ತು ಪ್ರತಿಭೆಯು ಇದರಿಂದಾಗಿ ಮೊಳಗುತ್ತಿದೆ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಉತ್ತಮ ಮೌಲ್ಯಗಳೊಂದಿಗೆ ಆಧುನಿಕ ಜ್ಞಾನವನ್ನು ಹೊಂದಿದಂತಹ ಶಿಕ್ಷಣವನ್ನು ನೀಡಲಿದ್ದು, ಇದರಿಂದಾಗಿ ಜಗತ್ತಿಗೆ ಒಂದು ಹೊಸ ಆಯಾಮ ದೊರೆಯಲಿದ್ದು, ಮನುಕುಲದ ಒಳಿತನ್ನು ಸಹ ಬಯಸಲಿದೆ. ಕರ್ನಾಟಕದ ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಯನ್ನು ಸಹ ಪಠ್ಯಕ್ರಮದ ಒಂದು ಭಾಗವನ್ನಾಗಿ ಸೇರಿಸಲಾಗಿದೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದ್ದು, ಅನೇಕ ಯೋಜನೆಗಳನ್ನು ಯುವಜನ ಮತ್ತು ಕ್ರೀಡಾ ಸೇವಾ ಇಲಾಖೆ ಒದಗಿಸಲಿದೆ ಎಂದರು. ವಿಶ್ವವಿದ್ಯಾಲಯ ಅನುದಾನ ಆಯೋಗದ ಸದಸ್ಯರು, ನವದೆಹಲಿ ಹಾಗೂ ವಿಶ್ರಾಂತ ಸಹಕುಲಪತಿಗಳು, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ ಪ್ರೊ. ಸುಷ್ಮಾಯಾದವ್ ಅವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ತುಮಕೂರು ವಿಶ್ವವಿದ್ಯಾನಿಲಯವು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಪಡೆಯುವ ಸಾಮಥ್ರ್ಯವನ್ನು ರೂಪಿಸುತ್ತಿದೆ ಮತ್ತು ಎಸ್‍ಸಿಪಿ/ ಟಿಎಸ್‍ಪಿ ಕೇಂದ್ರಗಳು ವಿದ್ಯಾರ್ಥಿಗಳಿಗೆ ಕೆಎಎಸ್/ಐಎಎಸ್/ಐಪಿಎಸ್, ಯುಜಿಸಿ, ಸಿಎಸ್‍ಐಆರ್, ಎನ್‍ಇಟಿ, ಕೆಸೆಟ್, ಕೆಪಿಎಸ್‍ಸಿ, ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಕಾರ್ಯಗಾರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿಲು ಸಂತಸವಾಗುತ್ತಿದೆ ಎಂದರು.
ಖ್ಯಾತ ವಿಜ್ಞಾನಿಗಳು, ನೊಬೆಲ್ ಪುರಸ್ಕøತರು ಹಾಗೂ ಆಧ್ಯಾತ್ಮಿಕ ಚಿಂತಕರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು, ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತಿತರ ಶಿಕ್ಷಣ ತಜ್ಞರ ಜೊತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಹೆಚ್ಚಿನ ಉಪಯೋಗ ಪಡೆದುಕೊಂಡಿರುತ್ತಾರೆ. ವಿ.ವಿ.ಯ ಪ್ರಸಾರಾಂಗ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಂಶೋಧನೆ ಆಧಾರಿತ ಪುಸ್ತಕಗಳನ್ನು ಮುದ್ರಿಸಿ ಹೊರತಂದಿದೆ ಎಂದರು.
ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಸ್ತಾರವಾಗುತ್ತದೆ ಮತ್ತು ಹೊಸ ಆವಿಷ್ಕಾರ ಸಾಧ್ಯವಾಗುತ್ತದೆ ಎಂದ ಅವರು, ನಮ್ಮ ದೇಶದ ಭವಿಷ್ಯ ನಾವು ನಮ್ಮ ಮಕ್ಕಳಿಗೆ ನೀಡುವ ಗುಣಮಟ್ಟದ ಶಿಕ್ಷಣದ ಮೇಲೆ ನಿಂತಿದೆ ಎಂದರು.
ಈ ಘಟಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಪ್ರಖ್ಯಾತ ಕೊಳಲು ವಾದಕರಾದ ಪ್ರವೀಣ್ ಗೋಡ್ಕಿಂಡಿ, ಶ್ರೀ ಯದುಗಿರಿ ಯತಿರಾಜ ಮಠ, ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿ, ಚತ್ತೀಸ್‍ಘಡದ ಮಹಾತ್ಮಗಾಂಧಿ ವಿ.ವಿ.ಯ ಯೂನಿವಸಿಟಿ ಆಫ್ ಹಾರ್ಟಿಕಲ್ಚರ್ ಅಂಡ್ ಫಾರೆಸ್ಟ್ರಿ ಡ್ರಗ್ ಕುಲಪತಿ ಡಾ. ರಾಮಶಂಕರ್ ಕುರಿಲ್ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು. ಸ್ನಾತಕೋತ್ತರ ಗಣಿತ ಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದ ರಮ್ಯ ಜಿ. 5 ಬಂಗಾರದ ಪದಕ ಪಡೆದುಕೊಂಡರು.
ಒಟ್ಟು 72 ವಿದ್ಯಾರ್ಥಿಗಳಿಗೆ 96 ಬಂಗಾರದ ಪದಕ ಹಾಗೂ 6 ನಗದು ಬಹುಮಾನ ಪ್ರಧಾನ ಮಾಡಲಾಯಿತು. ಕಲಾನಿಕಾಯದ 30 ಮಂದಿ, ವಾಣಿಜ್ಯ ಹಾಗೂ ನಿರ್ವಹಣ ನಿಕಾಯದ 21 ಮಂದಿ ವಿಜ್ಞಾನ ತಂತ್ರಜ್ಞಾನ ನಿಕಾಯದ 23 ಮಂದಿ ಸೇರಿ ಒಟ್ಟು 74 ಮಂದಿಗೆ ಪಿಹೆಚ್‍ಡಿ ಪದವಿ ಹಾಗೂ 10386 ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಧಾನ ಮಾಡಲಾಯಿತು. ತುಮಕೂರು ವಿ.ವಿ.ಯ ಪ್ರಭಾರ ಕುಲಪತಿಗಳಾದಂತಹ ಪ್ರೊ. ಕೇಶವ ಅವರು, ಎಲ್ಲರನ್ನು ಸ್ವಾಗತಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.

(Visited 1 times, 1 visits today)