ತುಮಕೂರು :

      ಮುಂಬರುವ ಶೈಕ್ಷಣಿಕ ವರ್ಷದಿಂದ ತುಮಕೂರು ವಿಶ್ವವಿದ್ಯಾ ನಿಲಯವು ಆಂಶಿಕವಾಗಿ ಬಿದರಕಟ್ಟೆ ಹೊಸ ಕ್ಯಾಂಪಸ್‍ಗೆ ಸ್ಥಳಾಂತ ರವಾಗಲಿದೆ ಎಂದು ಕುಲಪತಿ ಕರ್ನಲ್ (ಪ್ರೊ.) ವೈ. ಎಸ್ ಸಿದ್ದೇಗೌಡ ತಿಳಿಸಿದರು.

     ಹೊಸ ಕ್ಯಾಂಪಸ್‍ಗೆ ಮಂಗಳವಾರ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸ್ನಾತಕೋತ್ತರ ಸಮಾಜಕಾರ್ಯ, ಜೀವ ರಸಾಯನಶಾಸ್ತ್ರ, ಸೂಕ್ಷ್ಮಾ ಣು ಜೀವಶಾಸ್ತ್ರ ಹಾಗೂ ಪರಿಸರ ವಿಜ್ಞಾನ ವಿಭಾಗಗಳು ಹೊಸ ಶೈಕ್ಷಣಿಕ ವರ್ಷದಿಂದ ಬಿದರಕಟ್ಟೆಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.

       ಲಭ್ಯವಿರುವ ಅನುದಾನದಿಂದ 240 ಎಕರೆ ವಿಸ್ತೀರ್ಣದ ಹೊಸ ಕ್ಯಾಂಪಸ್‍ನ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ಯಾಂಪಸ್ ಪೂರ್ಣಗೊಳ್ಳಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕ್ಯಾಂಪಸ್ ಮೂಡಿಬರಲಿದೆ ಎಂದರು. ತಲಾ ರೂ. 36 ಕೋಟಿ ವೆಚ್ಚದ ಮೂರು ಶೈಕ್ಷಣಿಕ ಬ್ಲಾಕ್‍ಗಳು ಒಂದೇ ಕಡೆ ತಲೆಯೆತ್ತಲಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಮುಂದಿನ ವರ್ಷದ ವೇಳೆಗೆ ಕನಿಷ್ಠ 12 ವಿಭಾಗಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

         ಮಹಿಳಾ ವಿದ್ಯಾರ್ಥಿ ನಿಲಯ, ಪುರುಷ ವಿದ್ಯಾರ್ಥಿ ನಿಲಯ ಹಾಗೂ ಸಂಶೋ ಧನಾರ್ಥಿಗಳ ವಸತಿಗೃಹ- ಹೀಗೆ ರೂ. 17.5 ಕೋಟಿ ವೆಚ್ಚದ ಮೂರು ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಒಂದೆರಡು ತಿಂಗಳಲ್ಲಿ ಬಳಕೆಗೆ ಸಿದ್ಧವಾಗಲಿವೆ. ಸಮಾಜ ಕಲ್ಯಾಣ ಇಲಾಖೆಯ ಅನುದಾನದಿಂದ ಇವುಗಳ ನಿರ್ಮಾಣ ಸಾಧ್ಯವಾಗಿದೆ ಎಂದರು.
ರೂ. 1.19 ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ರೂಸಾ ಅನುದಾನದಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

       ಹಿಂದೆ ಸರ್ಕಾರದಿಂದ ಮಂಜೂರಾದ ರೂ. 40 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಹೊಸ ಕ್ಯಾಂಪಸ್ ಪೂರ್ಣಗೊಳ್ಳಲು ಏನಿಲ್ಲವೆಂದರೂ ರೂ. 250 ಕೋಟಿ ಅನುದಾನದ ಅವಶ್ಯಕತೆಯಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅನುದಾನ, ರೂಸಾ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲಗಳನ್ನು ಬಳಸಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.

     ಕಲಾಭವನ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ವಿಜ್ಞಾನ ಕೇಂದ್ರಗಳ ಕಾಮಗಾರಿಗಳು ಕೂಡ ಪ್ರಗತಿಯಲ್ಲಿವೆ. ‘ವಿಜ್ಞಾನ ಜಗತ್ತು’ ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದು, ಅದಕ್ಕಾಗಿ 80 ಎಕರೆÉ ಜಾಗ ಮೀಸಲಿಡಲಾಗಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ವಿಶ್ವವಿದ್ಯಾನಿಲಯದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು ತನ್ನ ಕೇಂದ್ರವನ್ನು ಹೊಸ ಕ್ಯಾಂಪಸಿನಲ್ಲಿ ತೆರೆಯಲು ಆಸಕ್ತಿ ತೋರಿಸಿದೆ ಎಂದರು. ವಿಶ್ವವಿದ್ಯಾನಿಲಯದ ಇಂಜಿನಿಯರ್‍ಗಳಾದ ಮಂಜುನಾಥ್, ನಾಗರಾಜ್ ಕೆ.ಎಸ್ ಉಪಸ್ಥಿತರಿದ್ದರು.

(Visited 4 times, 1 visits today)