ತುರುವೇಕೆರೆ:


ನಮ್ಮ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಗುಡಿಸಲು ರಹಿತ ಗ್ರಾಮವನ್ನಾಗಿ ನಿರ್ಮಿಸುವ ಗುರಿ ಇದ್ದು, ಈಗಾಗಲೇ ಗೊಲ್ಲ ಸಮುದಾಯಕ್ಕೆ 1500 ಮನೆಗಳು ಮಂಜೂರಾಗಿದ್ದು, ಇನ್ನೂ ಸಹ ಗೊಲ್ಲ ಜನಾಂಗದವರು ಮನೆಗಳ ಅವಶ್ಯಕತೆ ಇದ್ದರೆ ಕೂಡಲೇ ಗ್ರಾಮ ಪಂಚಾಯಿತಿ ಅಥವಾ ನಮ್ಮ ಬಳಿ ಅಗತ್ಯ ದಾಖಲೆ ಒದಗಿಸಿದರೆ ಸರ್ಕಾರದಿಂದ ಇನ್ನೂ ಸಹ ಹೆಚ್ಚಿನ ಮನೆಗಳನ್ನು ತರುವುದಾಗಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ಮಾಯಸಂದ್ರ ಹೋಬಳಿಯ ವರಾಹಸಂದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಮಾನ್ಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಉತ್ತರ ನೀಡಿದ್ದು, ಲೋಕಸಭೆಯ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚಿಸುವಂತೆ ರಾಜ್ಯದ ಹಲವಾರು ಮಂತ್ರಿಗಳು, ಶಾಸಕರ ಜೊತೆ ತಾಲೂಕಿನ ಗೊಲ್ಲ ಸಮಾಜದ ಮುಖಂಡರುಗಳನ್ನು ದೆಹಲಿಗೆ ಕರೆದುಕೊಂಡು ಹೋಗಲಾಗುವುದು ಎಂದರು.
ತಾಲೂಕಿನಲ್ಲಿರುವ ಸುಮಾರು 70 ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು. ರಾಜ್ಯದಲ್ಲಿರುವ ಏಕೈಕ ಗೊಲ್ಲ ಸಮುದಾಯದ ಮಹಿಳೆ ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ರವರನ್ನು ಮಂತ್ರಿ ಮಾಡುವಂತೆ ನಾನೂ ಸೇರಿದಂತೆ ಬಿ.ಜೆ.ಪಿ.ಯ ಕೆಲವು ಶಾಸಕರು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.
ಗೊಲ್ಲರಹಟ್ಟಿಗಳಲ್ಲಿ ಈಗಲೂ ಸಹ ಕೆಲವು ಮೌಢ್ಯದ ಆಚರಣೆಗಳನ್ನು ಆಚರಿಸುತ್ತಿದ್ದು, ಅವುಗಳನ್ನು ಕೈಬಿಡುವಂತೆ ಶಾಸಕಿ ಪೂರ್ಣಿಮ ಶ್ರೀನಿವಾಸ್ ರನ್ನು ಗೊಲ್ಲರಹಟ್ಟಿಗಳಿಗೆ ಕರೆದುಕೊಂಡು ಹೋಗಿ ಮೌಢ್ಯದ ಆಚರಣೆಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಬೈತರಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಬಿ.ಜೆ.ಪಿ ಮುಖಂಡರುಗಳಾದ
ವಿ.ಬಿ. ಸುರೇಶ್, ವಕೀಲ ಮುದ್ದೇಗೌಡ, ನಾಗಲಾಪುರ ಮಂಜಣ್ಣ, ಸೋಮಣ್ಣ, ಅಂಬಲದೇವನಹಳ್ಳಿ ತಿಮ್ಮೇಗೌಡ ಸೇರಿದಂತೆ ಯಾದವ ಸಮಾಜದ ಮುಖಂಡರುಗಳು ಉಪಸ್ಥಿರತಿದ್ದರು.

(Visited 1 times, 1 visits today)