ರೋಹಿಣಿ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ

ತುರುವೇಕೆರೆ:

      ತಾಲ್ಲೂಕಿನ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ ಸುರಿದ ರೋಹಿಣಿ ಮಳೆಯಿಂದ ಇಳೆಯೆಲ್ಲ ತಂಪಾಗಿ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

      ತಾಲೂಕಿನಲ್ಲಿ ಇದುವರೆವಿಗೂ ಸರಿಯಾದ ಮಳೆ ಬಾರದೆ ಮುಂಗಾರು ಕುಂಠಿತಗೊಂಡು ರೈತರಲ್ಲಿ ಆತಂಕ ಮನೆಮಾಡಿತ್ತು. ತಾಲೂಕಿನ ಮಾಯಸಂದ್ರ ಹಾಗೂ ದಬ್ಬೇಘಟ್ಟ ಹೋಬಳಿಗಳಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದದ್ದು ಬಿಟ್ಟರೆ ದಂಡಿನಶಿವರ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆ ಮರೀಚಿಕೆಯಾಗಿ ಮುಂಗಾರು ಬೆಳೆ ಕೈಕೊಟ್ಟಿತು ಅನ್ನುವಷ್ಟರಲ್ಲಿ ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ತಾಲೂಕಿನ ದಂಡಿನಶಿವರ, ರಾಮಡಿಹಳ್ಳಿ ಮಾಚೇನಹಳ್ಳಿ, ಅಮ್ಮಸಂದ್ರ, ಅಂಘರಾಖನಹಳ್ಳಿ, ಹಡವನಹಳ್ಳಿ, ದುಂಡಾ, ಸಂಪಿಗೆ ಸೇರಿ ಸುತ್ತಾಮುತ್ತ ಹಲವು ಕಡೆಗಳಲ್ಲಿ ಸುರಿದ ರೋಹಿಣಿ ಮಳೆ ಭೂಮಿಯನ್ನು ತಂಪೆರೆಯಿತು.

      ದಂಡಿನಶಿವರ ಹೋಬಳಿ ಅಮ್ಮಸಂದ್ರ ವೈನ್ ಶಾಪ್ ಮುಂಬಾಗದ ರಸ್ತೆಯಲ್ಲಿ ಮರವೊಂದು 11ಕೆವಿ ವಿದ್ಯುತ್ ಕಂಬದ ಮೇಲೆ ಉರುಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಅಂಘರಾಖನಹಳ್ಳಿ ಗ್ರಾಮದ ರೈತನೋರ್ವನ ತೆಂಗಿನ ಮರ ಹಾಗೂ ಬೆಂಡೆಬೆಳೆ ನೆಲಕಚ್ಚಿದೆ. ದಬ್ಬೇಘಟ್ಟ ಹೋಬಳಿ ಮುದ್ದನಹಳ್ಳಿ ಹತ್ತಿರ ಮಳೆ ಗಾಳಿಗೆ 9 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆ ಗಾಳಿಯ ವೇಗ ಜಾಸ್ತಿಯಿದ್ದರಿಂದ ಮರಗಳು ಬಿದ್ದಿದ್ದು ಕೆಲವು ಮನೆಗಳ ಶೀಟ್‍ಗಳು ಗಾಳಿಗೆ ಹಾರಿ ಸಣ್ಣ-ಪುಟ್ಟ ಅವಘಡಗಳು ಸಂಭವಿಸಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

(Visited 8 times, 1 visits today)

Related posts