ತುಮಕೂರು:

      ಜಿಲ್ಲಾ ವಕ್ಫ್ ಸಮಿತಿಗೆ ನಿರ್ವಹಣಾ ಸಮಿತಿಯನ್ನು ರಾಜ್ಯ ವಕ್ಫ್ ಸಮಿತಿ ಏಕಪಕ್ಷೀಯವಾಗಿ ನೇಮಿಸಿರುವುದಕ್ಕೆ ಜಿಲ್ಲಾ ವಕ್ಫ್ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಕ್ಫ್ ಸಮಿತಿ ಆಡಳಿತಾಧಿಕಾರಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

       ವಕ್ಫ್ ಸಮಿತಿಗೆ ಚುನಾವಣೆ ನಡೆಸಲು ಸದಸ್ಯತ್ವ ಅಭಿಯಾನವನ್ನು ಬೈಲಾ ತಿದ್ದುಪಡಿ ಮಾಡಿ, ಜಿಲ್ಲೆಯಾದ್ಯಂತ ಸದಸ್ಯತ್ವ ನೋಂ ದಣಿಯನ್ನು ಮಾಡಲಾಗಿದ್ದು, ಈಗ ಬೈಲಾವನ್ನು ಉಲ್ಲಂಘಿಸಿ, ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಶಿಫಾರಸ್ಸಿನಂತೆ ನಿರ್ವಹಣಾ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ದೂರಿದ ಸದಸ್ಯರು ಜಿಲ್ಲಾ ವಕ್ಫ್ ಸಮಿತಿಯನ್ನು ಗಣನೆಗೆ ತೆಗೆದು ಕೊಳ್ಳದೇ ರಾಜ್ಯ ವಕ್ಫ್ ಸಮಿತಿ ನೇಮಿಸಿರುವ ನಿರ್ವಹಣಾ ಸಮಿತಿಗೆ ಅಧಿಕಾರವನ್ನು ನೀಡಬಾರದು ಎಂದು ಆಗ್ರಹಿಸಿದರು.

      ಸದಸ್ಯರಿಗೆ ಗೊತ್ತಿಲ್ಲ: ಜಿಲ್ಲಾ ವಕ್ಫ್ ಸಮಿತಿಗೆ ನೇಮಕವಾಗಿರುವ ನಿರ್ವಹಣಾ ಸಮಿತಿಯಲ್ಲಿರುವ ಸದಸ್ಯರಿಗೆ ನೇಮಕವಾಗಿರುವ ವಿಚಾರವೇ ಗೊತ್ತಿಲ್ಲದಂತೆ ನಿರ್ವಹಣಾ ಸಮಿತಿಯನ್ನು ಅಕ್ರಮವಾಗಿ ನೇಮಿಸಲಾಗಿದೆ. ವಕ್ಫ್ ಸಮಿತಿಯಲ್ಲಿ ಅನಾವಶ್ಯಕವಾಗಿ ರಾಜಕಾರಣವನ್ನು ಮಾಡಲಾಗಿದೆ. ವಕ್ಫ್ ಸಮಿತಿ ಇರುವುದು ಸಮುದಾಯಕ್ಕಾಗಿಯೇ ಹೊರತು ರಾಜಕಾರಣಕ್ಕಾಗಿ ಅಲ್ಲ, ಈ ರೀತಿಯ ಪ್ರವೃತ್ತಿಯನ್ನು ರಾಜ್ಯ ವಕ್ಫ್ ಸಮಿತಿ ಕೈಬಿಡಬೇಕು ಎಂದು ಒತ್ತಾಯಿಸಿದರು.

      ಸದಸ್ಯತ್ವ ನೋಂದಣಿ ಸಮಯದಲ್ಲಿ ಪ್ರತಿ ಸದಸ್ಯರಿಂದ 500ರಂತೆ ಮೂರು ಸಾವಿರ ಸದಸ್ಯರಿಂದ 16 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಿ ಆಡಳಿತ ಸಮಿತಿಯನ್ನು ಆಯ್ಕೆ ಮಾಡಬೇಕೆಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮಾಜಿ ಶಾಸಕರ ಶಿಫಾರಸ್ಸಿನಂತೆ ನಿರ್ವಹಣಾ ಸಮಿತಿಯನ್ನು ನೇಮಕಮಾಡಲಾಗಿದೆ, ಈಗ ನೇಮಕವಾಗಿರುವ ನಿರ್ವಹಣಾ ಸಮಿತಿಗೆ ಅಧಿಕಾರವನ್ನು ನೀಡಬಾರದು, ಅಧಿಕಾರ ನೀಡಿದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುಖಂಡರು ಆಡಳಿತಾಧಿಕಾರಿಗೆ ತರಾಟೆ ತೆಗೆದುಕೊಂಡರು.

      ಚುನಾವಣೆ ನಿಗದಿಗೆ ಆಗ್ರಹ: ಜಿಲ್ಲಾ ವಕ್ಫ್ ಸಮಿತಿಯ ಆಡಳಿತ ಸಮಿತಿಗೆ ಚುನಾವಣೆಯನ್ನು ನಿಗದಿ ಮಾಡಬೇಕು, ಈಗ ನೇಮಕವಾಗಿರುವ ನಿರ್ವಹಣಾ ಸಮಿತಿಗೆ ಅಧಿಕಾರವನ್ನು ನೀಡಬಾರದು ಎಂದು ಒತ್ತಾಯಿಸಿದ ಸದಸ್ಯರು, ಜಿಲ್ಲೆಯಲ್ಲಿ ಈಗಾ ಗಲೇ ಮೂರು ಸಾವಿರಕ್ಕೂ ಹೆಚ್ಚು ಮಂದಿ ವಕ್ಫ್ ಸಮಿತಿ ಸದಸ್ಯತ್ವ ಪಡೆದಿದ್ದು, ಚುನಾವಣೆ ಮೂಲಕ ಅಧ್ಯಕ್ಷರನ್ನು ನೇಮಕ ಮಾಡಬೇಕು, ಆಡಳಿತಾಧಿಕಾರಿಗಳು ಚುನಾವಣಾ ಪ್ರಕ್ರಿಯೆ ನಡೆಸಲು ಶಿಫಾರಸ್ಸು ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

      ಸದಸ್ಯರ ಒತ್ತಾಯಕ್ಕೆ ಉತ್ತರಿಸಿದ ಜಿಲ್ಲಾ ವಕ್ಫ್ ಆಡಳಿತಾಧಿಕಾರಿ ಅವರು, ಆಡಳಿತ ಸಮಿತಿ ನೇಮಕವಾಗಿರುವುದು ಸರಿಯಲ್ಲ, ಸಮಿತಿಗೆ ಚುನಾವಣೆಯನ್ನು ನಿಗದಿಪಡಿಸುವಂತೆ ರಾಜ್ಯ ವಕ್ಫ್ ಸಮಿತಿಗೆ ಜೂ.9ರಂದು ವರದಿಯನ್ನು ಕಳುಹಿಸಿರುವುದಾಗಿ ಸದಸ್ಯರಿಗೆ ತಿಳಿಸಿದರು.

      ಈ ವೇಳೆ ಮುಖಂಡರಾದ ಸೈಯದ್ ಮುದಾಸೀರ್, ಮುಕ್ತಿಯಾರ್, ಸೈಯದ್ ಬುರಾನ್, ಆರೀಫ್‍ವುಲ್ಲಾ, ಷಫಿ ಅಹಮದ್, ಶಮಿ, ಸುಯೈಲ್, ಜನಸೇವಾ ಸಮಿತಿ ಅಹಮದ್, ನಾಸೀರ್ ಸೇರಿದಂತೆ ಇತರರಿದ್ದರು.

(Visited 8 times, 1 visits today)