ತುಮಕೂರು:

ಕೃಷಿಯನ್ನೇ ನಂಬಿ ಬದುಕುತ್ತಿರುವ ತಿಗಳ ಸಮುದಾಯ ಸರಕಾರದ ಮುಂದಿಟ್ಟಿರುವ ಮೂರು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಇಂದೇ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಗಾಜಿನಮನೆಯಲ್ಲಿ ಅಗ್ನಿವಂಶ ಕ್ಷತ್ರೀಯ ತಿಗಳ ಸಮಾಜದವತಿಯಿಂದ ಆಯೋಜಿಸಿದ್ದ ತಿಗಳ ಸಮುದಾಯದ ಮೂಲ ಪುರುಷ ಶ್ರೀಅಗ್ನಿಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಎಲ್ಲಾ ಸ್ತರಗಳಲ್ಲಿಯೂ ಹಿಂದುಳಿದಿರುವ ತಿಗಳ ಸಮುದಾಯದ ಸಮಗ್ರ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಅಗ್ನಿವಂಶ ತಿಗಳ ಅಭಿವೃದ್ದಿ ನಿಗಮ ಸ್ಥಾಪನೆ,ಸರಕಾರದವತಿಯಿಂದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ ಹಾಗೂ ತುಮಕೂರಿನ ಕುಂದೂರಿನಲ್ಲಿ ಶ್ರೀಅಗ್ನಿಬನ್ನಿರಾಯಸ್ವಾಮಿ ದೇವಾಲಯ ಮತ್ತು ಪ್ರಸಾದ ನಿಲಯ ಸ್ಥಾಪನೆಗೆ ಅಗತ್ಯವಿರುವ 1.09 ಎಕರೆ ಜಮೀನು ಮಂಜೂರಿಗೆ ಸಂಬಂಧಿಸಿದಂತೆ ಇದೇ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ತಿಗಳ ಸಮುದಾಯ ಕೃಷಿಯನ್ನೇ ನಂಬಿ ಬದುಕುತ್ತಿದ್ದು,ತಮಗಿರುವ ಸಣ್ಣ ಹಿಡುವಳಿಯಲ್ಲಿಯೇ ಕಷ್ಟಪಟ್ಟು ದುಡಿದು ಬದುಕುತ್ತಿರುವ ಈ ಸಮುದಾಯ ಅರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರಕಾರ ನೀಡಲು ಸಿದ್ದವಿದೆ. ನಮ್ಮ ಸರಕಾರದಲ್ಲಿ ಎಲ್ಲಾ ತಳ ಸಮುದಾಯಗಳು ಘನತೆಯಿಂದ ಬದುಕಬೇಕೆಂಬ ಕಾರಣಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.ಪ್ರಸ್ತುತ ಸರಕಾರವೂ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ನಾಲ್ಕು ನೂರು ಕೋಟಿ ರೂಗಳನ್ನು ಮೀಸಲಿಟ್ಟಿದ್ದು, ಇದರ ಸೌಲಭ್ಯ ಪಡೆದು ಎಲ್ಲರೂ ಅಭಿವೃದ್ದಿ ಹೊಂದಬೇಕೆಂದು ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ತುಮಕೂರು ನಗರದ ಕಸಬಾ ಹೋಬಳಿ ಸರ್ವೆ ನಂಬರ 26ರ ಕಂದೂರು ಗ್ರಾಮದ ಬಳಿ ಇರುವ ಸರಕಾರಿ ಜಮೀನಿನಲ್ಲಿ 1.09 ಗುಂಟೆ ಜಮೀನನ್ನು ಶ್ರೀಅಗ್ನಿಬನ್ನಿರಾಯಸ್ವಾಮಿ ದೇವಾಲಯ ಮತ್ತು ಪ್ರಸಾದ ನಿಯಲ ಸ್ಥಾಪನೆಗೆ ಮಂಜೂರು ಮಾಡಿಕೊಡಲು ಬೇಡಿಕೆ ಇಟ್ಟಿದ್ದು,ಇಂದೇ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ ಜಮೀನು ಮಂಜೂರು ಮಾಡಿಸಿಕೊಡುವುದರ ಜೊತೆಗೆ, ದೇವಾಲಯ ನಿರ್ಮಾಣಕ್ಕೆ ನನ್ನ ಸ್ವಂತ ಹಣದಲ್ಲಿ 25 ಲಕ್ಷ ರೂಗಳನ್ನು ನೀಡಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಿಮ್ಮ ಸಮುದಾಯದವನ್ನು ನೋಡಿ ಕಲಿಯಬೇಕಾಗಿದೆ.ಯಜಮಾನರುಗಳ ಆಣತಿಯಂತೆ ಇಂದಿಗೂ ಒಗ್ಗಟ್ಟನ್ನು ಕಾಪಾಡಿಕೊಂಡು ಬಂದಿದ್ದೀರ.ಇದೇ ಒಗ್ಗಟ್ಟು ಮುಂದುವರೆಯಲಿ,ಶಿಕ್ಷಣಕ್ಕೆ, ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಅವರು ಸ್ವಾವಲಂಬಿಯಾಗಿ ಬದುಕಲು ವೇದಿಕೆ ನಿರ್ಮಿಸಿ ಎಂದು ಬಿ.ಎಸ್.ವೈ ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವಥ್‍ನಾರಾಯಣ ಮಾತನಾಡಿ,ತಿಗಳ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ವಿದೆ.ಆನೇಕ ಇತಿಹಾಸ,ಪುರಾಣಗಳಲ್ಲಿ ಈ ಸಮುದಾಯದ ಉಲ್ಲೇಖವಿರುವುದು ಹೆಮ್ಮೆ ಪಡುವಂತಹ ವಿಚಾರವಾಗಿದೆ. ಇಂದು ಬುಜಭಲಕ್ಕಿಂತ, ಬೌದ್ದಿಕ ಬಲಕ್ಕೆ ಹೆಚ್ಚಿನ ಮಾನ್ಯತೆ ಇದೆ. ಹಾಗಾಗಿ ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವತ್ತ ಗಮನಹರಿಸಿ,ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಸರಕಾರ ಮಾಡಲಿದೆ.ಹಿಂದುಳಿದ ವರ್ಗದ ಅಭಿವೃದ್ದಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ನಿಮ್ಮ ಸಮುದಾಯದ ಹಿರಿಯರು ಯಾವ ಕಾರ್ಯಕ್ರಮ ರೂಪಿಸಲು ಸಲಹೆ ನೀಡುತ್ತಾರೋ ಅದೇ ಕಾರ್ಯಕ್ರಮವನ್ನು ರೂಪಿಸಿ,ಅವರು ಸಹ ಇತರರಂತೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.ಅಲ್ಲದೆ ಸಮುದಾಯದ ಬಹುದಿನದ ಬೇಡಿಕೆಯಾದ ಪ್ರವರ್ಗ 1 ಕ್ಕೆ ಸೇರ್ಪಡೆ ಕುರಿತಂತೆ ಸಹ ಕ್ರಮ ವಹಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಮಹಾಸಭಾದ ಅಧ್ಯಕ್ಷ ಅಂಜನೇಯ ಮಾತನಾಡಿ,ಅಗ್ನಿವಂಶ ಕ್ಷತ್ರೀಯ ತಿಗಳ ಸಮಾಜದ ಕುಲ ಪುರುಷ ಶ್ರೀಅಗ್ನಿಬನ್ನಿರಾಯಸ್ವಾಮಿ,ಹಲವಾರು ಪುರಾಣಗಳಲ್ಲಿ ಇವರ ಹೆಸರು ಉಲ್ಲೇಖಗೊಂಡಿದೆ.4 ಕಟ್ಟೆ,8 ಗಡಿಗಳನ್ನು ಒಳಗೊಂಡಿರುವ ಸಮುದಾಯದ ಎಲ್ಲಾ ರೀತಿಯಲ್ಲಿಯೂ ಮುಂದುವರೆಸಲು ಸರಕಾರ ಸಹಕಾರ ನೀಡಬೇಕೆಂದರು.

ತುಮಕೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ,ಸರಕಾರ ತಿಗಳ ಸಮುದಾಯದ ಸಮಗ್ರ ಅಭಿವೃದ್ದಿಗೆ ತಿಗಳರ ಅಭಿವೃದ್ದಿ ನಿಗಮ ಸ್ಥಾಪನೆ,ಸರಕಾರದವತಿಯಿಂದಲೇ ಶ್ರೀಅಗ್ನಿಬನ್ನಿರಾಯಸ್ವಾಮೀ ಜಯಂತಿ ಆಚರಣೆ ಮತ್ತು ತುಮಕೂರು ನಗರದ ಕಸಬಾ ಕುಂದೂರು ಸರ್ವೆ ನಂಬರ್ 26ರಲ್ಲಿರುವ 1.09 ಎಕರೆ ಭೂಮಿಯನ್ನು ಅಗ್ನಿಬನ್ನಿರಾಯ ಸ್ವಾಮಿ ದೇವಾಲಯ ಮತ್ತು ಪ್ರಸಾದ ನಿಲಯ ಸ್ಥಾಪನೆಗೆ ಮಂಜೂರು ಮಾಡಿಕೊಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಬಿ.ಸುರೇಶಗೌಡ ಅವರುಗಳು ಸಮಾರಂಭ ಕುರಿತು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಣ್ಣಪ್ಪನಹಳ್ಳಿ ಶ್ರೀಶನೇಶ್ವರ ಮಠದ ಶ್ರೀಶ್ರೀಸೋಮಶೇಖರಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೌನ್‍ಹಾಲ್ ವೃತ್ತದಲ್ಲಿ ಶ್ರೀಅಗ್ನಿಬನ್ನಿರಾಯಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್, ಕರ್ನಾಟಕ ರಾಜ್ಯ ತಿಗಳ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ,ಶಾಸಕ ಜಿ.ಬಿ.ಜೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ರೆಡ್‍ಕ್ರಾಸ್ ರಾಜ್ಯ ಸಭಾಪತಿ ಎಸ್.ನಾಗಣ್ಣ, ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಗೋವಿಂದರಾಜು, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಜಿ.ಪಂ.ಮಾಜಿಸದಸ್ಯ ಕೃಷ್ಣಯ್ಯ. ಎಂ.ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್,ಪಾಲಿಕೆಯ ಮಾಜಿ ಮೇಯರ್,ಹಾಲಿ ಸದಸ್ಯೆ ಲಲಿತ ರವೀಶ್,ಮಾಜಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ,ಪಾಲಿಕೆ ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ,ತಿಗಳ ಸಮಾಜದ ಯಜಮಾನರುಗಳಾದ ಟಿ.ಹೆಚ್.ಹನುಮಂತರಾಜು, ಟಿ.ಎಸ್.ಶಿವಕುಮಾರ್, ದಾಸೇಗೌಡ, ಕೃಷ್ಣಪ್ಪ, ಮಂಜಣ್ಣ, ಗಂಗಹನುಮಯ್ಯ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 35 times, 1 visits today)