ತುಮಕೂರು:

      ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ತಳ ಸಮುದಾಯದವರಿಗೆ ಇರುವ ಕೀಳರಿಮೆ, ಮುಜುಗರ, ಊಹಾಪೋಹಗಳಿಂದ ಅರ್ಜಿ ಹಾಕುವುದೇ ಬೇಡ ಎನ್ನುವ ಮನಸ್ಥಿತಿಯಿಂದ ಹೊರಬಂದು, ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜು ಹೇಳಿದರು.

      ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌಲಭ್ಯವಿಲ್ಲದ ದಿನಗಳಲ್ಲಿ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಓದಿದ ತಳಸಮುದಾಯದ ವಿದ್ಯಾರ್ಥಿಗಳು, ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತಿಚೆಗೆ ಸೌಲಭ್ಯ ಹೆಚ್ಚಾಗುತ್ತಿದ್ದರೆ, ವಿದ್ಯಾರ್ಥಿಗಳಲ್ಲಿ, ತಳಸಮುದಾಯದಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ, ಸರ್ಕಾರ ಸಾವಿರಾರು ಕೋಟಿ ರೂಗಳನ್ನು ವೆಚ್ಚ ಮಾಡಿ, ಸ್ಪರ್ಧಾತ್ಮಕ ತರಬೇತಿಗಳನ್ನು ನೀಡಿದರೂ ವಿದ್ಯಾರ್ಥಿಗಳು ಉತೀರ್ಣರಾಗುತ್ತಿಲ್ಲ ಎಂದರು.

      ಲಕ್ಷಾಂತರ ರೂಪಾಯಿ ನೀಡಿ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆದವರು ಯಶಸ್ವಿಯಾಗುತ್ತಿಲ್ಲ, ವ್ಯಾಪಾರಿ ದೃಷ್ಠಿಕೋನವನ್ನು ಹೊಂದಿರುವ ಖಾಸಗಿ ಸಂಸ್ಥೆಗಳಲ್ಲಿ ಕಲಿಯುವವರು ಹಿಂದೇ ಬೀಳುತ್ತಿದ್ದಾರೆ, ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್‍ನಲ್ಲಿ ತರಬೇತಿ ಪಡೆದವರು, ಯಶಸ್ವಿಯಾಗುತ್ತಿರುವುದಕ್ಕೆ ಅವರಲ್ಲಿನ ಶ್ರದ್ಧೆಯೇ ಕಾರಣ, ನಿಸ್ವಾರ್ಥವಾಗಿ ಸಮುದಾಯ ಸೇವೆ ಮಾಡುವವರ ಸಂಖ್ಯೆ ಹೆಚ್ಚಳವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

      ಉನ್ನತ ವಿದ್ಯಾಭ್ಯಾಸವನ್ನು ಪಡೆದವರು, ಭಾರತದ ಭೌಗೋಳಿಕ ಲಕ್ಷಣಗಳನ್ನು ಹೇಳುತ್ತಿಲ್ಲ, ಇದಕ್ಕೆ ಅವರಲ್ಲಿ ಕಲಿಕೆಯ ಆಸಕ್ತಿ ಇಲ್ಲದೇ ಇರುವುದೇ ಕಾರಣ, ಸರ್ಕಾರದ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯಲು ಅರ್ಜಿ ಹಾಕುವರ ಸಂಖ್ಯೆ ಕಡಿಮೆ ಆಗಿದೆ, ಎಸ್ಸಿ-ಎಸ್ಟಿ ವಿದ್ಯಾರ್ಥಿ ಸೀಟು ಖಾಲಿ ಉಳಿಯುತ್ತಿದೆ, ಪೋಷಕರು ಖಾಸಗಿ ಶಾಲೆಗಳಿಗೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು, ಸರ್ಕಾರಿ ವಸತಿ ಶಾಲೆಗೆ ಪ್ರಾಮುಖ್ಯತೆ ನೀಡುವುದಿಲ್ಲ, ಖಾಸಗಿ ಶಾಲೆಗಳಿಂತ ಸರ್ಕಾರಿ ವಸತಿ ಶಾಲೆಗಳಲ್ಲಿ ಉತ್ತಮ ಸೌಕರ್ಯ ಒದಗಿಸಲಾಗಿದೆ ಎಂದರು.

      ವಸತಿ ಶಾಲೆಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಎಂಜನಿಯರಿಂಗ್, ಡಿಪ್ಲೊಮೊ ಶಿಕ್ಷಣವನ್ನು ನೀಡುವ ಯೋಜನೆಯ ಬಗ್ಗೆ ಸರ್ಕಾರ ಪರಾಮರ್ಶೆ ನಡೆಸಿದ್ದು, ತಳಸಮುದಾಯದ ಮಕ್ಕಳನ್ನು ಪಿಯುಸಿವರೆಗೆ ವಸತಿ ಶಾಲೆಗಳಲ್ಲಿ ಓದಿಸಬೇಕಾಗಿದೆ ಎನ್ನುವುದು ಪೋಷಕರು ಮನಗಾಣಬೇಕಿದೆ, ಸರ್ಕಾರ ಪಿಯುಸಿ ನಂತರ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಅವಕಾಶ ಕಲ್ಪಿಸಿದ್ದು, ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

      ಜಿಲ್ಲಾ ಪರಿಶಿಷ್ಠ ಪಂಗಡಗಳ ಕಲ್ಯಾಣಾಧಿಕಾರಿ ರಾಜಕುಮಾರ್ ಮಾತನಾಡಿ, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 7 ಲಕ್ಷ ಎಸ್ಸಿ-ಎಸ್ಟಿ ಜನಸಂಖ್ಯೆ ಇದೆ, ಅಂದಾಜು 25 ಕೋಟಿ ವಿದ್ಯಾರ್ಥಿ ವೇತನ, 10 ಕೋಟಿ ಬಹುಮಾನ ಮೊತ್ತವನ್ನು ನೀಡುತ್ತಿದ್ದೇವೆ, ಆದರೆ ಇಲ್ಲಿನ ತರಬೇತಿಯಲ್ಲಿ ಭಾಗವಹಿಸಿದರ ಸಂಖ್ಯೆ ಕೇವಲ 75, 1 ಲಕ್ಷ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿರುವ ಜಿಲ್ಲೆಯಲ್ಲಿ 75 ಸ್ಪರ್ಧಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ, ಅವಕಾಶಗಳು ಎಲ್ಲರಿಗೂ ದೊರಕುವುದಿಲ್ಲ, ಉತ್ತಮ ಮಾರ್ಗದರ್ಶನ ದೊರಕುವುದೇ ಕಷ್ಟ ಅಂತಹದರಲ್ಲಿ ಕೆಲವರ ಇಚ್ಛಾಶಕ್ತಿಯಿಂದ ದೊರಕುತ್ತಿರುವ ತರಬೇತಿಯನ್ನು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

      ಬಡತನದಲ್ಲಿ ಬೆಳೆದವರೇ ಉನ್ನತ ಅಧಿಕಾರಿಗಳಾಗಿರುವ ನಿದರ್ಶನಗಳು ನಮ್ಮ ಮುಂದಿವೆ, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದು ಬುದ್ಧಿವಂತರಾಗಬೇಕಿದೆ. ಇಂದು ಬಡತನ ಎಂದರೆ ಜ್ಞಾನ ಇಲ್ಲದೇ ಇರುವುದು ಎಂದರ್ಥ, ಸಿಗುವ ಅವಕಾಶಗಳನ್ನು ಪಡೆದುಕೊಂಡು, ಕೀಳರಿಮೆಯನ್ನು ಬಿಟ್ಟು ಮುಂದೆ ಬರಬೇಕಿದೆ, ಯುವಶಕ್ತಿ ಮುಂದೆ ದುರಂತದ ದಿನಗಳಿವೆ, ಅಂಬೇಡ್ಕರ್ ಪರಿಶ್ರಮದಿಂದ ದೊರೆತಿರುವ ಮೀಸಲಾತಿಯನ್ನು ಪಡೆದುಕೊಂಡು, ಶ್ರದ್ಧೆಯಿಂದ ಓದುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

      ಅಂಬೇಡ್ಕರ್ ಕೋಚಿಂಗ್ ಸೆಂಟರ್ ಮೂಲಕ ಉಚಿತ ಕೋಚಿಂಗ್ ಪಡೆದು ಅಬಕಾರಿ ಇಲಾಖೆಗೆ ಆಯ್ಕೆಯಾಗಿರುವ ಅಂಬಿಕಾ ಹಾಗೂ ಬೆಂಗಳೂರಿನ ಪೊಲೀಸ್ ಇಲಾಖೆಗೆ ನೇಮಕವಾಗಿರುವ ಎಂ.ಎಂ.ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕೋಚಿಂಗ್ ಸೆಂಟರ್‍ನ ಪಿ.ಜೆ.ಜಯಶೀಲ, ವಿ.ಟಿ.ಕೃಷ್ಣಮೂರ್ತಿ, ನಾಗರಾಜು, ರವೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

(Visited 61 times, 1 visits today)