ತುಮಕೂರು:

      ದೇಶದಲ್ಲಿ ಆರ್ಥಿಕತೆ ಕುಸಿತಕ್ಕೆ ಹಾಗೂ ಉದ್ಯೋಗ ಕುಸಿತವಾಗಿರುವುದಕ್ಕೆ ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ ನೀತಿಗಳು ಹಾಗೂ ಜನವಿರೋಧಿ ನೀತಿಗಳೇ ಕಾರಣ, ದೇಶದಲ್ಲಿ ಆರ್ಥಿಕತೆ ಕುಸಿಯಲು ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಒತ್ತಾಯಿಸಿದರು.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 2014ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಭರವಸೆಗಳನ್ನು ಈಡೇರಿಸ ಮೋದಿ ಸರ್ಕಾರ, 2019ರ ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಅಧಿಕಾರವನ್ನು ಗಿಟ್ಟಿಸಿಕೊಂಡಿದೆ, ದೇಶದಲ್ಲಿ ನಿರುದ್ಯೋಗ ನಿವಾರಣೆ, ಕೃಷಿ, ಶಿಕ್ಷಣ, ಕೈಗಾರಿಕೆಯ ವಿಚಾರಗಳಲ್ಲಿ ದೇಶ ನಿರೀಕ್ಷಿತ ಪ್ರಗತಿ ಸಾಧಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

      ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೇಶದ ಬೆಳವಣಿಗೆಗೆ ಯಾವುದೇ ವಿಧದ ಮಹತ್ವದ ಕೊಡುಗೆಯನ್ನು ನೀಡದೇ ಆರ್ಟಿಕಲ್ 370, ವೀರ ಸಾರ್ವಕರ್ ಅವರಿಗೆ ಭಾರತ ರತ್ನ, ವಿದೇಶಿ ಪೌರವ್ವ, ಆರ್‍ಸಿಇಪಿಯಂತಹ ವಿಚಾರಗಳನ್ನು ಮುಂದಿಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡುವಂತೆ ಮಾಡಿದ್ದಾರೆ. ಕೇಂದ್ರದ ಅವೈಜ್ಞಾನಿಕ ನೀತಿಗಳಿಂದ ರಾಷ್ಟ್ರದ ಜಿಡಿಪಿ ಕುಸಿತಗೊಂಡಿದೆ. ಆಟೋ ಮೊಬೈಲ್ ಕ್ಷೇತ್ರ ಸೇರಿದಂತೆ ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ಕುಸಿತವಾಗಿರುವುದರಿಂದ ಕೋಟ್ಯಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದರು.

      ಮಾಜಿ ಶಾಸಕ ರಫೀಕ್ ಅಹ್ಮದ್ ಅವರು ಮಾತನಾಡಿ, ರಾಷ್ಟದಲ್ಲಿ ಅತಿವೃಷ್ಠಿ, ಅನಾವೃಷ್ಠಿಯಿಂದ ಜನರ ಬದುಕು ದುಸ್ತರವಾಗಿದ್ದರು, ಪ್ರಧಾನಿ ಮೋದಿ ಅವರು ಮಾತ್ರ ವಿದೇಶಿ ಪ್ರವಾಸದಲ್ಲಿ ತಲ್ಲೀನರಾಗಿದ್ದಾರೆ, ವಿದೇಶಿ ಕಾರ್ಯಕ್ರಮಗಳಲ್ಲಿ ಭಾರತ ಸಮೃದ್ಧವಾಗಿದೆ ಎಂದು ಸುಳ್ಳು ಹೇಳುತ್ತ, ದಾಖಲೆಗಳಲ್ಲಿ ಮಾತ್ರ ಭಾರತ ಅಭಿವೃದ್ಧಿಯಾಗಿದೆ ಎಂಬ ಭ್ರಮೆಯನ್ನು ಸೃಷ್ಟಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

      ಆರ್‍ಸಿಇಪಿ ಒಪ್ಪಂದ ಮಾಡಿಕೊಂಡು ಏಷಿಯಾದ ಫೆಸಿಫಿಕ್‍ನ 16 ರಾಷ್ಟ್ರಗಳ 12000 ಪದಾರ್ಥಗಳಿಗೆ ಆಮದು ಸುಂಕವಿಲ್ಲದೆ, ಮಾರಾಟ ಮಾಡಲು ಅವಕಾಶ ಮಾಡಿಕೊಡಲು ಮೋದಿ ಮುಂದಾಗಿದ್ದು, ಇದರಿಂದ ರಾಷ್ಟ್ರದ ಕೃಷಿಕರ, ಕಾರ್ಮಿಕರು ಹಾಗೂ ಸಣ್ಣ ಉದ್ದಿಮೆದಾರರು ಬೀದಿಗೆ ಬೀಳಲಿದ್ದು, ಈ ಒಪ್ಪಂದದಿಂದಾಗಿ ಭಾರತದ ಆರ್ಥಿಕತೆ ಮತ್ತಷ್ಟು ದುಸ್ತರವಾಗಲಿದ್ದು, ಮೇಕ್ ಇನ್ ಇಂಡಿಯಾ, ಸ್ವದೇಶಿ ಎಂದೆಲ್ಲ ಘೋಷಣೆ ಮಾಡುತ್ತಾ, ವಿದೇಶಿ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸಿ, ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ, ಇದರಿಂದಾಗಿ ಈಸ್ಟ್ ಇಂಡಿಯಾ ಕಂಪನಿಯಂತೆ ಭಾರತವನ್ನು ಆಕ್ರಮಿಸಲು ಅವಕಾಶ ಮಾಡಿಕೊಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಕೇಂದ್ರ ಸರ್ಕಾರದ ಜನವಿರೋಧಿ ಪ್ರವೃತಿ ಕೈಬಿಟ್ಟು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಸೂಕ್ತ ಸೂಚನೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಕೇಂದ್ರ ಸರ್ಕಾರದ ಜನವಿರೋಧಿ ಪ್ರವೃತಿ ಕೈಬಿಟ್ಟು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಸೂಕ್ತ ಸೂಚನೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ನಾರಾಯಣ್, ಜಿ.ಪಂ.ಸದಸ್ಯ ಕೆಂಚಮಾರಯ್ಯ, ಶ್ರೀಮತಿ ಗೀತಾ ರುದ್ರೇಶ್, ಶ್ರೀಮತಿ ನಾಗಮಣಿ, ಶ್ರೀಮತಿ ಗೀತಮ್ಮ, ಸೇರಿದಂತೆ ಜಿಲ್ಲೆಯ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಹಿರಿಯ ಮುಖಂಡರುಗಳು, ಕಾರ್ಯಕರ್ತರುಗಳು, ಇತರರು ಭಾಗವಹಿಸಿದ್ದರು.

(Visited 15 times, 1 visits today)