ತುರುವೇಕೆರೆ:

      ಪಟ್ಟಣದ ಕ್ರೀಡಾಂಗಣ ತುಂಬ ನೀರು ನಿಂತು ವಾಯು ವಿಹಾರಿಗಳಿಗೆ ತೊಂದರೆಯಾಗಿದ್ದು ರೊಚ್ಚಿಗೆದ್ದ ಮುಂಜಾನೆ ಗೆಳೆಯರ ಬಳಗದ ಸದಸ್ಯರು ಸೋಮವಾರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಗಿಡ ನೆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

      ಪಟ್ಟಣದಲ್ಲಿ ವಾಯುವಿಹಾರಿಗಳಿಗೆ ಇದೊಂದೇ ಸೂಕ್ತ ಸ್ಥಳವಾಗಿದ್ದು ಇಲ್ಲಿ ಪ್ರತಿದಿನ ಮುಂಜಾನೆ ನೂರಾರು ನಾಗರೀಕರು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಪಟ್ಟಣದಲ್ಲಿ ಇದೊಂದು ಕ್ರೀಡಾಂಗಣ ಹೊರತುಪಡಿಸಿದರೆ ಯಾವುದೇ ಸ್ಥಳವಿಲ್ಲ. ಆದರೆ ಇತ್ತೀಚೆಗೆ ಮೈದಾನದಲ್ಲಿ 200 ಮೀಟರ್ ಟ್ರಾಕ್ ಫಾರ್ಮೇಶನ್‍ನ ಕಾಮಗಾರಿ ನೆಪದಲ್ಲಿ ಕ್ರೀಡಾಂಗಣವನ್ನು ಹಾಳುಗೆಡವಿದ್ದಾರೆ. ಇದನ್ನು ಮಾಡಿದ ಉದ್ದೇಶವಾದರೂ ಏನು? ಯಾರಿಗೆ ಉಪಯೋಗವಾಗಲಿದೆ ಎಂಬುದೂ ಗೊತ್ತಿಲ್ಲ. ಮಾಡಿದ ಕಾಮಗಾರಿ ಸಮರ್ಪಕವಾಗಿಲ್ಲ. ವ್ಯವಸ್ಥಿತವಾಗಿ ಮಾಡದ್ದರಿಂದ ಕ್ರೀಡಾಂಗಣದಲ್ಲಿ ಮಳೆ ನೀರು ಆಚೆ ಹೋಗಲು ವ್ಯವಸ್ಥೆಯಿಲ್ಲದೆ ಕ್ರೀಡಾಂಗಣ ಒಳಗೆ ನೀರಿನಿಂದ ಆವೃತವಾಗಿದೆ.

      ಮುಂಜಾನೆ ಗೆಳೆಯರ ಬಳಗದ ಡಿ.ಜೆ.ರಂಗಸ್ವಾಮಿ ಮಾತನಾಡಿ, ಈಗ್ಗೆ ಐದಾರು ತಿಂಗಳ ಹಿಂದೆ ಸ್ಪೋಟ್ಸ್ ಅಂಡ್‍ಕಲ್ಚರಲ್ ಆಕ್ಟಿವಿಟೀಸ್ ವತಿಯಿಂದ ಕ್ರೀಡಾಂಗಣದಲ್ಲಿ 200 ಮೀಟರ್ ಟ್ರಾಕ್ ಫಾರ್ಮೇಶನ್ ನ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಈಗಾಗಲೇ ಕಾಮಗಾರಿಯನ್ನು ಸಹಾ ಪೂರೈಸಲಾಗಿದೆ. ಆದರೆ ಈ ಕಾಮಗಾರಿ ಕಳಪೆಯಿಂದ ಕೂಡಿದ್ದು ಟ್ರ್ಯಾಕ್ ಸುತ್ತಲೂ ನಿರ್ಮಿಸಿರುವ ಚರಂಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಪ್ರಯೋಜನಕ್ಕೆ ಬಾರದಂತಾಗಿದೆ. ವ್ಯವಸ್ಥಿತ ರೀತಿಯಲ್ಲಿ ಮಾಡದ್ದರಿಂದ ಟ್ರ್ಯಾಕ್ನ ಒಳ ಹಾಗೂ ಹೊರ ಬಾಗದಲ್ಲಿ ಕೆರೆಯೋಪಾದಿಯಲ್ಲಿ ನಿಂತಿದೆ. ಇನ್ನು ಟ್ರ್ಯಾಕ್ ಸುತ್ತಲೂ ಅರ್ಧ ಅಡಿ ತಡೆಗೋಡಿ ಮಾಡಿರುವುದರಿಂದ ಟ್ರ್ಯಾಕ್ ಒಳಬಾಗದ ಮೈದಾನದ ನೀರು ಹೊರಹೋಗಲು ಆಸ್ಪದವಿಲ್ಲದೆ ಅಲ್ಲೇ ನಿಂತು ಸಣ್ಣ ಕಟ್ಟೆಗಳಾಗಿ ಮಾರ್ಪಾಟಾಗಿವೆ. ಮೆಟ್ಟಿಲ ಮೇಲೆ ವಾಕ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.  ಸಂಬಂದಿಸಿದವರು ಕೂಡಲೇ ಇತ್ತ ಗಮನ ಹರಿಸಿ ವ್ಯವಸ್ಥಿತವಾಗಿ ಮಾಡಿ ಇಲ್ಲವೇ ಮೊದಲಿನಂತೆ ಮಾಡಿಕೊಡಿ ಎಂದರು.

      ಶಂಕರಪ್ಪ ಮಾತನಾಡಿ ಗಣೇಶನ್ನ ಮಾಡಿ ಅಂದರೆ ಅವರಪ್ಪನ್ನ ಮಾಡಿದ್ರಂತೆ ಅನ್ನೋ ಗಾದೆಯಂತೆ ಈ ಟ್ರ್ಯಾಕ್ ಮಾಡುವ ನೆಪದಲ್ಲಿ ಕ್ರೀಡಾಂಗಣವನ್ನು ಹಾಳುಮಾಡಿರುವುದನ್ನು ನೋಡಿದರೆ ಇದರಲ್ಲಿ ಅಧಿಕಾರಿಗಳೂ ಸಹಾ ಶಾಮೀಲಾಗಿರಬಹುದು ಎಂಬ ಸಂದೇಹ ಮೂಡುತ್ತಿದೆ. ಇಲ್ಲಿ ನಿವೃತ್ತಿ ಹೊಂದಿದ, ಹಿರಿಯ ಹಾಗೂ ಕಿರಿಯ ಸೇರಿದಂತೆ ಎಲ್ಲಾ ವಯಸ್ಸಿನ ನಾಗರೀಕರು ಪ್ರತಿ ದಿನ ಬೆಳಿಗ್ಗೆ ಇಲ್ಲಿಗೆ ವಾಯು ವಿಹಾರಕ್ಕೆ ಬಂದ ಸಂಧರ್ಬದಲ್ಲಿ ಇಲ್ಲಿನ ಅವ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ. ಶಾಸಕರು ಸಹಾ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಆದಷ್ಟು ಬೇಗ ಸಂಬಂದಪಟ್ಟವರು ಇದನ್ನು ಸರಿಪಡಿಸದಿದ್ದಲ್ಲಿ ಕ್ರೀಡಾಂಗಣದ ಬಾಗಿಲಿಗೆ ಮಣ್ಣು ಸುರಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

      ಈ ಸಂಧರ್ಭದಲ್ಲಿ ಮುಂಜಾನೆ ಗೆಳೆಯರ ಬಳಗದ ಟಾಕೀಸ್ ಸತೀಶ್, ರೈತಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ, ರೇವಣ್ಣ, ಪರಮೇಶ್, ಬಾಬು, ವೃಷಬೇಂದ್ರ, ಶಿವಣ್ಣ, ಸೋಮು, ನಂದೀಶ್, ವಾಡೇಕರ್, ರಂಗಸ್ವಾಮಿ, ಗ್ಯಾಷ್ ಸತ್ಯಣ್ಣ, ತೇಜು, ಅಭಿ ಸೇರಿದಂತೆ ಅನೇಕ ನಾಗರೀಕರು ಇದ್ದರು.

(Visited 11 times, 1 visits today)