ತಿಪಟೂರು :
      ನಗರದಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಸಿಡಿಮದ್ದು ಪ್ರದರ್ಶನದ ವೇಳೆ ಪಟಾಕಿ ಹಚ್ಚಿದ ಸಂದರ್ಭದಲ್ಲಿ ಪಟಾಕಿಯ ರಭಸಕ್ಕೆ ಸ್ಥಳದಲ್ಲಿದ್ದ ಕಲ್ಲು ಸಿಡಿದು ಯುವತಿ ಸಾವನ್ನಪ್ಪಿದ್ದಾಳೆ.

      ಸಿತಾರ(23) ಮೃತ ದುರ್ದೈವಿ. ಈಕೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿ ಮಾರಸಂದ್ರ ಗ್ರಾಮದ ವಾಸಿ ರಾಜಣ್ಣನ ಮಗಳು.ಬೆಂಗಳೂರಿನಲ್ಲಿ ವಾಸವಿದ್ದ ಸಿತಾರ ಸಂಬಂಧಿಕರ ಮನೆಗೆ ಗಣಪತಿ ಜಾತ್ರೆಗೆ ಶನಿವಾರ ಆಗಮಿಸಿದ್ದು ಭಾನುವಾರ ತಡರಾತ್ರಿ 1 ಗಂಟೆ ಸಮಯದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ.

      ಪಟಾಕಿ ಪ್ರದರ್ಶನದ ವೇಳೆ ಕಲ್ಲು ಸಿಡಿದು ಕಲ್ಲಿನ ಬಲವಾದ ಪೆಟ್ಟಿನಿಂದ ಸಿತಾರ ಮೃತಪಟ್ಟಿರಬಹುದೆಂದು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮೃತಳ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಕೇವಲ ಕಲ್ಲಿನ ಏಟಿನಿಂದ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದು, ಈ ಸಾವು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ. ಕಿಡಿಗೇಡಿಗಳೇನಾದರು ಕಲ್ಲು ಎಸೆದು ಹುಡುಗಿ ಸಾವಿಗೆ ಕಾರಣವಾದರೇ ಎಂಬ ಅನುಮಾನ ಕೆಲವರಿಗಿದೆ. ಪೊಲೀಸ್  ತನಿಖೆಯಿಂದ ಸತ್ಯ ಹೊರಬರುವ ಸಾಧ್ಯತೆಯಿದೆ.

      ಮಾನ್ಯ ಜಿಲ್ಲಾ  ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ ದಿವ್ಯ.ವಿ.ಗೋಪಿನಾಥ್ ರವರು ಸೇರಿದಂತೆ ತಿಪಟೂರು ಉಪಾಧೀಕ್ಷಕರಾದ ವೇಣುಗೋಪಾಲರವರು ಹಾಗು ಬಂದೂಬಸ್ತ್ ನಲ್ಲಿದ್ದ ಅಧಿಕಾರಿಗಳ ಸಮ್ಮುಖದಲ್ಲಿ ದುರಂತ ನಡೆದಿದೆ.

(Visited 2,463 times, 1 visits today)