ತುಮಕೂರು:

      ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಸಮುದಾಯದವರ ಸ್ಮಶಾನ ಭೂಮಿಗಳನ್ನು ಗುರ್ತಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದರು.

      ತುಮಕೂರು ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ/ವರ್ಗದ ಜನಾಂದವರಿಗೆ ಸ್ಮಶಾನ ಭೂಮಿ ಒದಗಿಸುವುದು ಮೊದಲ ಆದ್ಯತೆ. ಸುಮಾರು 75 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಳಿಲ್ಲ. ಭೂ-ಲಭ್ಯತೆ ಪಟ್ಟಿ ಆಧಾರದ ಮೇಲೆ ಭೂಮಿ ನೀಡಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗೀ ಜಮೀನನ್ನು ಖರೀದಿ ಮಾಡಿ ಜಾಗ ನೀಡಲಾಗುವುದು ಎಂದು ಅವರು ತಿಳಿಸಿದರು.

      ಗೂಳೂರು, ಹೆಗ್ಗೆರೆ, ಹರಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಡುಗಡೆಯಾಗುವ ಅನುದಾನವನ್ನು ಪರಿಶಿಷ್ಟ ಜಾತಿ/ವರ್ಗಗಳ ಕಾಮಗಾರಿ ಯೋಜನೆಗೆ ಸರಿಯಾಗಿ ಬಳಸಿಕೊಂಡಿಲ್ಲ ಎಂದು ದಲಿತ ಮುಖಂಡರೊಬ್ಬರು ಸಭೆಗೆ ತಿಳಿಸಿದಾಗ ಜಿಲ್ಲಾಧಿಕಾರಿ ಅವರು ಮಾತನಾಡಿ ಈ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

      ಪಾವಗಡ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

     ಮಧುಗಿರಿ ನಗರದಲ್ಲಿ ನಗರಸಭೆಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ. ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸಭೆಯಲ್ಲಿಯೇ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿ, ದಲಿತ ಸಮುದಾಯಕ್ಕೆಂದು ಮೀಸಲಿರುವ ಅಂಗಡಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

      ಮಧುಗಿರಿ ತಾಲೂಕಿನಲ್ಲಿ ಶಾಲೆಯ ಪಕ್ಕದಲ್ಲಿಯೇ ಲಿಕ್ಕರ್ ಶಾಪ್ ಇರುವ ಬಗ್ಗೆ ದೂರು ಆಲಿಸಿದ ಅವರು ಎಸ್‍ಸಿ/ಎಸ್‍ಟಿ ಕಾಲೋನಿ ಹಾಗೂ ಶಾಲೆಯ ಪಕ್ಕದಲ್ಲಿರುವ ಲಿಕ್ಕರ್ ಶಾಪ್‍ಗಳನ್ನು ಪರಿಶೀಲಿಸಿ ಮುಚ್ಚಲು ಕ್ರಮವಹಿಸುವಂತೆ ಅಬಕಾರಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸ್ಮಶಾನ ಅಭಿವೃದ್ಧಿಗಾಗಿ 200 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಸ್ಮಶಾನ ಅಭಿವೃದ್ಧಿಯಾಗದೇ ಇರುವ ಗ್ರಾಮಗಳಲ್ಲಿ ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ಸೂಚಿಸಿದರಲ್ಲದೇ ಗುಬ್ಬಿ ತಾಲೂಕಿನ ಸಿ.ಎಸ್ ಪುರ, ಕಲ್ಲೂರು ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.

      ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು ಸಿ.ಎಸ್. ಪುರ, ಕಲ್ಲೂರು ಗ್ರಾಮದಲ್ಲಿ ಈಗಾಗಲೇ ಸ್ಮಶಾನದ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ನಂದಿಹಳ್ಳಿ ಗ್ರಾಮದ ಸ್ಮಶಾನ ಭೂಮಿಯಲ್ಲಿ ಪಕ್ಕದ ಜಮೀನಿನವರು ಉಳುಮೆ ಮಾಡಿ ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಈ ಬಗ್ಗೆ ಜಮೀನಿನವರಿಗೆ ತಿಳಿಸಲಾಗಿದ್ದು, ತೆಂಗಿನ ಸಸಿಗಳನ್ನು ತೆರವುಗೊಳಿಸಿದ ನಂತರ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

      ಆಯಾ ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಶಾಂತಿ ಸಭೆಗೆ ದಲಿತ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸಬೇಕು ಎಂದು ಎಲ್ಲಾ ತಹಶೀಲ್ದಾರ್‍ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

      ಚಿಕ್ಕನಾಯಕನಹಳ್ಳಿ ತೀರ್ಥಪುರ ಗ್ರಾಮದಲ್ಲಿ ಕ್ಷೌರದ ಅಂಗಡಿಗಳಿಗೆ ದಲಿತರನ್ನು ಪ್ರವೇಶಿಸುತ್ತಿಲ್ಲ ಎಂದು ದಲಿತರೊಬ್ಬರು ಸಭೆಗೆ ದೂರು ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಯಾವುದೇ ಗ್ರಾಮದಲ್ಲಿ ದೇವಾಲಯ, ಅಂಗಡಿಗಳಿಗೆ ದಲಿತರಿಗೆ ಪ್ರವೇಶ ನೀಡದಿರುವ ಬಗ್ಗೆ ದೂರುಗಳು ಬಂದರೆ ಕೂಡಲೇ ಅದನ್ನು ಕಟ್ಟುನಿಟ್ಟಾಗಿ ಆಲಿಸಿ, ಪ್ರವೇಶ ನೀಡದವರಿಗೆ ಸಭೆಗೆ ನಡೆಸಿ ಅರಿವು ಮೂಡಿಸಬೇಕು. ಅಲ್ಲದೇ ಮಾತು ಕೇಳದವರ ವಿರುದ್ಧ ದೂರು ದಾಖಲು ಮಾಡಬೇಕು ಎಂದು ಎಲ್ಲಾ ತಹಶೀಲ್ದಾರ್ ಹಾಗೂ ಇಓಗಳಿಗೆ ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವಕುಮಾರ್, ಕೆ.ಆರ್.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್‍ನಾಥ್ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಹಾಜರಿದ್ದರು.

(Visited 27 times, 1 visits today)