ಗುಬ್ಬಿ :

      ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನದ ಬಗ್ಗೆ ನನಗೂ ಅನುಕಂಪವಿದೆ. ರಾಷ್ಟ್ರೀಯ ಪಕ್ಷದ ಮುಂಚೂಣಿ ನಾಯಕರಾಗಿದ್ದ ಡಿಕೆಶಿ ಅವರಿಗೆ ಹೀಗಾಗಬಾರದಿತ್ತು ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮೃದುಧೋರಣೆ ತೋರಿದರು.
ತಾಲ್ಲೂಕಿನ ಸಿ.ಎಸ್.ಪುರ ಮತ್ತು ಜನ್ನೇನಹಳ್ಳಿ ಗ್ರಾಮದಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನದ 16 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಒಂದು ಸಮುದಾಯದ ಪ್ರಬಲ ನಾಯಕರಾಗಿ ಇಡಿ ತನಿಖೆಗೆ ಒಳಪಟ್ಟಿರುವ ಡಿಕೆಶಿ ಅವರ ಬಗ್ಗೆ ವೈಯಕ್ತಿಕ ಅಭಿಮಾನವಿದೆ. ತನಿಖೆಯು ಕಾನಿನ ಚೌಕಟ್ಟಿನಲ್ಲಿ ನಡೆಯಲಿದೆ. ಕಾನೂನಿಗೆ ತಲೆ ಬಾಗಬೇಕಿದೆ ಎಂದರು.

      ತುರುವೇಕೆರೆ ಕ್ಷೇತ್ರಕ್ಕೆ ಈ ಮೊದಲು ಅಭಿವೃದ್ದಿಗೆ ಕೆಲಸಕ್ಕೆ ಶ್ರಮಪಟ್ಟು ತಂದಿದ್ದ 200 ಕೋಟಿ ರೂಗಳ ಅನುದಾನಕ್ಕೆ ಸುಖಾಸುಮ್ಮನೇ ಅಡ್ಡಿಪಡಿಸಲಾಗಿತ್ತು. ಮೈತ್ರಿ ಸರ್ಕಾರದ ತಡೆಯಿಂದ ಒಂದು ವರ್ಷದಿಂದ ಮಾಡಲಾಗದ ಕೆಲಸವನ್ನು ಒಂದು ತಿಂಗಳಲ್ಲಿ ಆರಂಭಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ಅಭಿವೃದ್ದಿಗೆ ಅಸ್ತು ಅಂದಿದ್ದಾರೆ. ಈಗಾಗಲೇ 15 ಕೋಟಿ ರೂ ಕೆಲಸಗಳು ಈ ಹೋಬಳಿಯಲ್ಲೇ ಆರಂಭವಾಗಿವೆ. ತುರುವೇಕೆರೆ ಪಟ್ಟಣ ಪಂಚಾಯಿತಿಗೆ 10 ಕೋಟಿ ರೂಗಳನ್ನು ತರಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ 5 ಕೋಟಿ ರೂ ಹಾಗೂ ಸಿ.ಎಸ್.ಪುರ ಕೆರೆಗೆ ನೇರ ನೀರು ಹರಿಸುವ ವಿಶೇಷ ಕಾಮಗಾರಿಗೆ 5 ಕೋಟಿ ರೂಗಳನ್ನು ತಕ್ಷಣದಲ್ಲೇ ಮಂಜೂರು ಮಾಡಿಸಲಾಗುವುದು ಎಂದರು.

      ಹೇಮೆ ಹರಿಸುವ ವಿಚಾರದಲ್ಲಿ ಕೊಟ್ಟ ಮಾತಿನಂತೆ ಸಿ.ಎಸ್.ಪುರ ಹೋಬಳಿ ಸೇರಿದಂತೆ ತುರುವೇಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸುತ್ತೇನೆ. ಕಳೆದ 5 ವರ್ಷದಿಂದ ನೀರು ಕಾಣದ ಸಿ.ಎಸ್.ಪುರ ಕೆರೆಗೆ ಈ ಬಾರಿ ತುಂಬಿಸಲಾಗುವುದು. ಈ ಕಾರ್ಯ ನಿರಂತರವಾಗಿ ನಡೆದಿದೆ. ಹೇಮೆ ವಿಚಾರದಲ್ಲಿ ಸಲ್ಲದ ಹೇಳಿಕೆ ನೀಡಿದ್ದ ವಿರೋಧ ಪಕ್ಷವು ನೀರು ಹರಿದ ಬಳಿಕ ತಣ್ಣಗಾಗಿದ್ದಾರೆ. ಆದರೆ ತೊಂದರೆ ನೀಡಲು ಆಲೋಚಿಸುವ ಕೆಲವರು ರೈತರ ವಿಚಾರವನ್ನು ಪಕ್ಷಾತೀತವಾಗಿ ಮಾಡಬೇಕು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದ ಅವರು ಕಲ್ಲೂರಿನಲ್ಲಿರುವ ನೇಕಾರರ ಕುಟುಂಬದ ಮನೆಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸ ಮಾಡುತ್ತೇನೆ. ಯಾವುದೇ ಮಧ್ಯವರ್ತಿಗಳಿಗೆ ಆಸ್ಪದ ನೀಡದೆ ಇಲ್ಲಿನ 130 ಕುಟುಂಬಗಳಿಗೂ ಮೂಲಸವಲತ್ತು ಒದಗಿಸಿ ಇರುವ ಮನೆಯಲ್ಲೇ ವಾಸಿಸಲು ಅನುವು ಮಾಡಲಾಗುವುದು ಎಂದರು.

      ಈ ಸಂದರ್ಭದಲ್ಲಿ ತಾಪಂ ಸದಸ್ಯ ಭಾನುಪ್ರಕಾಶ್, ಗ್ರಾಪಂ ಅಧ್ಯಕ್ಷೆ ಗೀತಾ ರಾಮಕೃಷ್ಣಪ್ಪ, ಮುಖಂಡರಾದ ಜೆ.ಪಿ.ಬಸವರಾಜು, ಚನ್ನಿಗಪ್ಪ, ಪಾಂಡುರಂಗಯ್ಯ, ಗಂಗಾಧರಯ್ಯ, ಮುನಿಸ್ವಾಮಿಗೌಡ, ಸುರೇಶ್, ಬೆಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಸುರೇಶ್ ಇತರರು ಇದ್ದರು.

(Visited 38 times, 1 visits today)