ತುಮಕೂರು :
ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸಲೆಂದು ರಾಷ್ಟ್ರೀಯ ನಾಗರಿಕ ವೇದಿಕೆಯ ತುಮಕೂರು ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಜಾಥಾ ನಡೆಸಿತು.
ನಗರದ ಬಿ.ಎಚ್.ರಸ್ತೆಯಿಂದ ಆರಂಭವಾದ ಜಾಥಾ ಈಗ ಎಂ.ಜಿ.ರಸ್ತೆ, ಗುಂಚಿ ಚೌಕದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ನಡೆಸುತ್ತಿರುವ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಬಸ್‍ನಿಂದ ಇಳಿದು ಜಾಥಾದಲ್ಲಿ ಹೆಜ್ಜೆ ಹಾಕಿದರು. ಪುರಭವನದ ಪಕ್ಕದಲ್ಲೆ ಇರುವ ಸಿದ್ಧಗಂಗಾ ಪಿಯು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.
ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರಧ್ವಜಗಳು, ಓಂ ಚಿಹ್ನೆಯುಳ್ಳ ತ್ರಿಕೋನಾಕಾರದ ಕೇಸರಿ ಬಣ್ಣದ ಧ್ವಜಗಳು ರಾರಾಜಿಸುತ್ತಿದ್ದವು. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳು ಮೊಳಗಿದವು.
ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ತುಮಕೂರು ನಗರದ ವಿವಿಧ ಪ್ರದೇಶಗಳಿಂದ ಬಂದಿರುವ ಸಾವಿರಾರು ಜನರು ಭಾಗವಹಿಸಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರಿಂದ ಡ್ರೋನ್ ಕ್ಯಾಮೆರಾ ಕಣ್ಗಾವಲು ಇದೆ.





