
ತುಮಕೂರು: ಸರ್ಕಾರದ ಯೋಜನೆಯ ಅಂತ:ಸತ್ವವನ್ನು ಮೊದಲು ಅರ್ಥ ಮಾಡಿಕೊಂಡು ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕು. ಯೋಜನೆ ಅನುಷ್ಠಾನ ಮಾಡುವವರಿಗೆ ಶಕ್ತಿ ತುಂಬಬೇಕಾಗಿರುವುದು ಒಳ್ಳೆಯ ಅಧಿಕಾರಿಯ ಲಕ್ಷಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿರುವ ಜಿ.ಪ್ರಭು ಹೇಳಿದರು.
ಶನಿವಾರ ಸಂಜೆ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಪತ್ನಿಯೊಂದಿಗೆ ಹೃದಯಸ್ಪರ್ಶಿ ಅಭಿನಂದನೆ ಸ್ವೀಕರಿಸಿದ ಜಿ.ಪ್ರಭು ಮಾತನಾಡಿ, ಸೇವೆಯಲ್ಲಿರುವವರು ಯಾವತ್ತೂ ಸಕಾರಾತ್ಮಕ ಅಭಿಪ್ರಾಯ ಇಟ್ಟುಕೊಳ್ಳಬೇಕು. ನಾನು ಏನು ಹೇಳುತ್ತೇನೆ ಅದನ್ನು ನಾನು ಮೊದಲು ಮಾಡಬೇಕು ಎನ್ನುವ ಆಯಾಮದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ನನ್ನ ಕರ್ತವ್ಯದ ಸೇವಾವಧಿಯಲ್ಲಿ ಆರ್‌ಡಿಪಿಆರ್ ಇಲಾಖೆ ಸಿಕ್ಕಿದ್ದು ದೊಡ್ಡ ಸೌಭಾಗ್ಯವೇ ಸರಿ. ನಾನು ಜಿಲ್ಲಾ ಪಂಚಾಯ್ತಿ ಸಿಇಓ ಆಗಿರದಿದ್ದರೆ ಹಳ್ಳಿಗಾಡಿನ ಜನರು ಸೇರಿದತೆ ವಿವಿಧ ಇಲಾಖೆಗಳ ಮೂಲಕ ದೊಡ್ಡ ಸಮುದಾಯಕ್ಕೆ ಸಲ್ಲಿಸಬಹುದಾದ ಸೇವೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ಈ ಅವಕಾಶವನ್ನು ೨೦೨೩ರಲ್ಲಿ ತುಮಕೂರಿಗೆ ಕಲ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿಗಳಿಗೆ ಅಭಾರಿಯಾಗಿದ್ದೇನೆ. ಈ ಎರಡೂವರೆ ವರ್ಷದಲ್ಲಿ ಜಿ.ಪಂ. ಸಿಇಓ ಪಯಣದಲ್ಲಿ ಸಮಯವನ್ನೂ ಲೆಕ್ಕಿಸದೆ ಇಲಾಖೆಯ ಯೋಜನೆಯ ಗುರಿ ತಲುಪಲು ತಮ್ಮೊಂದಿಗೆ ಹೆಜ್ಜೆ ಹಾಕಿದ ಎಲ್ಲಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಹಕಾರ ನೀಡಿದ್ದರು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೂ ಸಹಕರಿಸಿದರು ಎಂದು ಜಿ.ಪ್ರಭು ಹೇಳಿದರು.
ಶಿಕ್ಷಣವು ಸಾಮಾಜಿಕ ಹಾಗು ವೈಯಕ್ತಿಕ ಪ್ರಗತಿಗೂ ಸಿಕ್ಕಿರುವ ಪ್ರಮುಖ ಅಸ್ತ. ಶಿಕ್ಷಣದ ಪ್ರತಿಫಲವಾಗಿ ದೊರೆತಿತುವ ಸರ್ಕಾರಿ ನೌಕರಿಯನ್ನು ದೇಶ ಸೇವೆಗೆ ಸಿಕ್ಕಿರುವ ಮಹತ್ವದ ಅವಕಾಶವೆಂದು ಭಾವಿಸಿ ಅದನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಯೋಜನೆಗಳನ್ನು ಶೇಕಡ ೧೦೦ರಷ್ಟು ಕಾರ್ಯಗತಗೊಳಿಸೋಣ ಎಂದರು. ಸಂವಿಧಾನ ಜಾಗೃತಿ ಅಂಗವಾಗಿ ಜಿಲ್ಲೆಯಾದ್ಯಂತ ೯೫ ಕಿ.ಮೀ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು ಮಹತ್ವದ ದಾಖಲೆಯಾದ ಈ ಕಾರ್ಯದಲ್ಲಿ ಎಲ್ಲರ ಸಹಕಾರ ದೊರಕಿತು ಎಂದು ಹೇಳಿದರು.
ಜಿ.ಪ್ರಭು ಅವರ ಆಡಳಿತಾವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಈಶ್ವರಪ್ಪ, ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಮಧುಗಿರಿ ಉಪವಿಭಾಗಾಧಿಕಾರಿ, ಗೋಟೂರು ಶಿವಪ್ಪ, ತೊಟಗಾರಿಕಾ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಡಿಹೆಚ್‌ಓ ಡಾ.ಚಂದ್ರಶೇಖರ್, ಶಿರಾ ಇಓ ಹರೀಶ್, ಇಂಜಿನಿಯರ್ ಕೃಷ್ಣಕಾಂತ್, ಮತ್ತಿತರ ಅಧಿಕಾರಿಗಳು, ಪತ್ರಕರ್ತರ ಪರವಾಗಿ ಮಂಜುನಾಥ್‌ಗೌಡ, ಜಯಣ್ಣ ಬೆಳಗೆರೆ, ಜಯನುಡಿ ಜಯಣ್ಣ ಮೊದಲಾದವರು ಜಿ.ಪ್ರಭು ಅವರು ಮಾಡಿದ ಕಾರ್ಯಸಾಧನೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊ0ಡರು.
ಜಿ.ಪ್ರಭು ಅವರು ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ನೌಕರರು ಯಾವರೀತಿ ಸನ್ನದ್ದರಾಗಬೇಕು ಎಂಬುದನ್ನು ನಮಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಒತ್ತು ಕೊಟ್ಟರು. ನರೇಗಾ, ಜೆಜೆಎಂ ಅನುಷ್ಠಾನದಲ್ಲಿ ರಾಷ್ಟಮಟ್ಟದಲ್ಲಿ ತುಮಕೂರಿನ ಗರಿ ಮೂಡಲು ಕಾರಣರಾಗಿದ್ದಾರೆ. ಇಂತಹ ಕ್ರಿಯಾಶೀಲ ಅಧಿಕಾರಿಯನ್ನು ಜಿಲ್ಲೆಯಿಂದ ಬೀಳ್ಕೊಡಲು ಮನಸ್ಸು ಭಾರವಾಗುತ್ತಿದೆ. ಮುಂದೆ ತುಮಕೂರು ಜಿಲ್ಲಾಧಿಕಾರಿಯಾಗಿ ಬರಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದರು.





