ತುಮಕೂರು :

      ತುಮಕೂರಿನಲ್ಲಿ ಸಿಆರ್​ಪಿಎಫ್ ಯೋಧನ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನಪ್ಪಿರುವುದು ಅನುಮಾನ ಮೂಡಿಸಿದೆ.

      ತುಮಕೂರು  ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,  24 ವರ್ಷದ ಗೌರಮ್ಮ ಮೃತ ಮಹಿಳೆ. ಸಿಆರ್​ಪಿಎಫ್​ ಯೋಧ ರವೀಶ್ ಹಾಗೂ ಗೌರಮ್ಮ 6 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಆಕೆಗೆ ಗಂಡನ ಮನೆಯಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ತಂದೆ ತಾಯಿ ಆರೋಪಿಸಿದ್ದಾರೆ. ಇದೀಗ ನೇಣು ಬಿಗಿದುಕೊಂಡು ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ರವೀಶ್​ ಕುಟುಂಬಸ್ಥರು ಪರಾರಿಯಾಗಿದ್ದಾರೆ.

         ಮದುವೆ ಸಂದರ್ಭದಲ್ಲಿ ಸಾಕಷ್ಟು ಒಡವೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇಷ್ಟಾದರೂ ಗೌರಮ್ಮನಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಇದೀಗ ಆಕೆಯ ಸಾವಿಗೂ ಗಂಡನ ಮನೆಯವರ ಕಿರುಕುಳ ಕಾರಣ. ಗೌರಮ್ಮನನ್ನು ಚೆನ್ನಾಗಿ ಥಳಿಸಿ ಸಾಯಿಸಿದ್ದಾರೆ. ಬಳಿಕ ನೇಣು ಬಿಗಿಯಲಾಗಿದೆ ಎಂದು ಗೌರಮ್ಮನ ಕುಟುಂಬಸ್ಥರು ದೂರಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಗೌರಮ್ಮಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಆಕೆ ಮೃತಪಟ್ಟ ಬಳಿಕ ಎಲ್ಲರೂ ಕಾಲ್ಕಿತ್ತಿದ್ದಾರೆ.

      ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಕರ್ತವ್ಯದಿಂದ ವಾಪಸ್ಸಾಗಿದ್ದ ಗಂಡ ರವೀಶ್ ಕೂಡ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತನ್ನ ಹೆಂಡತಿ ಗರ್ಭಿಣಿ ಎಂದೂ ಕೂಡ ನೋಡದೆ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.‌ ತನ್ನ ಸಂಬಂಧಿಕರ ಜೊತೆಯಲ್ಲೂ ಗೌರಮ್ಮನನ್ನು ಮಾತನಾಡಲು ಬಿಡದೆ ದಿನನಿತ್ಯ ಮಾನಸಿಕ ಕಿರುಕುಳ ನೀಡಿ, ಹಣ ಒಡವೆ ತರುವಂತೆ ಹೊಡೆಯುತ್ತಿದ್ದರಂತೆ. ಗೌರಮ್ಮಳ ಸಾವನ್ನ ಅನುಮಾನಿಸಿ, ಆಕೆಯ ಮನೆಯವರು ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯೋಧ ರವೀಶ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಎಫ್ ಐಆರ್ ಕೂಡ ದಾಖಲಾಗಿದೆ.

      ಸದ್ಯ ಪೊಲೀಸರು ಮೃತಳ ಗಂಡ ರವೀಶನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮೃತಳ ದೇಹವನ್ನ ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ. ಒಟ್ಟಾರೆ, ದೇಶ ಕಾಯುತ್ತಾ ಇಡೀ ದೇಶದ ಜನರಿಂದ ಗೌರವ ಪಡೆದು ಮಾದರಿಯಾಗಿ ಬದುಕಬೇಕಿದ್ದ ಯೋಧ ಹಾಗೂ ಯೋಧನ ಕುಟುಂಬವೇ ಈ ರೀತಿ ಹೆಣ್ಣುಮಗಳ ಮೇಲೆ ದೌರ್ಜನ್ಯ ನಡೆಸಿರೋದು ವ್ಯಾಪಕ ಟೀಕೆಗೆ ಗುರಿಯಾಗಿದೆ.

(Visited 8 times, 1 visits today)