ಮಧುಗಿರಿ :

      ತಾಲೂಕಿನಲ್ಲಿ ಬೇಸಿಗೆ ಬಹುದೂರವಿದ್ದರೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಘಟನೆ ತಾಲೂಕಿನ ಮುದ್ದಯ್ಯನಪಾಳ್ಯದಲ್ಲಿ ಕಳೆದ 2 ತಿಂಗಳುಗಳಿಂದ ಸಾರ್ವಜನಿಕರ ಪಾಡು ಹೇಳದ್ದಾಗಿದೆ.

      ಈ ಗ್ರಾಮದಲ್ಲಿ ಕಳೆದ 2 ತಿಂಗಳಿಂದ ನೀರಿಗಾಗಿ ಟ್ಯಾಂಕರ್‍ಗಳ ಮೂಲಕ ಸರಭರಾಜು ಮಾಡಲಾಗುತ್ತಿತ್ತು. ಇದ್ದ 1 ಕೊಳವೆ ಬಾವಿ ಭತ್ತಿಹೋಗಿರುವುದರಿಂದ ನೀರಿಗಾಗಿ ಖಾಸಗಿಯವರ ಮೊರೆಹೋಗಿದ್ದಾರೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ಸಿಗುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗವಿರುವ ಮುನ್ನಾಬಾಯಿ ಎಂಬುವವರಿಗೆ ಸೇರಿರುವ ಕೊಳವೆ ಬಾವಿಯಿಂದ ಗಂಟೆಗೆ ಇಷ್ಟು ಎಂದು ದರ ನಿಗದಿ ಮಾಡಿ ಬಿಜವಾರ ಗ್ರಾ.ಪಂ ಯವರು ನೀರನ್ನು ಕಳೆದೆರಡು ದಿನಗಳಿಂದ ನೀರಿನ ಅನುಕೂಲ ಮಾಡಿಕೊಡಲಾಗಿದೆ.

       ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಕೊಡಿಗೇನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ರಸ್ತೆ ತಡೆ ನಡೆಸಿದಾಗ ಗ್ರಾಮದ 7 ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿದ್ದರಿಂದ, ನೀರಿಗಾಗಿ ಪ್ರತಿಭಟನೆ ಮಾಡಿದರೆ ಜೈಲು ಪಾಲಾಗುತ್ತೇವೆ ಎಂದು ಅಂಜುತ್ತಿದ್ದಾರೆ.

      ಈ ಗ್ರಾಮದಲ್ಲಿ 6 ಕಿರು ನೀರು ಸರಬರಾಜು ಯೋಜನೆಯಡಿ ಟ್ಯಾಂಕುಗಳಿದ್ದು, ಬಹುತೇಕ ಎಲ್ಲವೂ ಬರಿದಾಗಿದೆ. ಇನ್ನ ದನ ಕರುಗಳಿಗಾಗಿ ಕಟ್ಟಿರುವ   3 ತೊಟ್ಟಿಗಳಲ್ಲಿ ಸಿಂಗಲ್ ಡ್ರಾಪ್ ಸಹ ನೀರಿಲ್ಲದೇ ಬಣಗುಡುತ್ತಿದೆ. 115 ಕುಟುಂಬಗಳಿರುವುದರಿಂದ ನೀರಿಗಾಗಿ ಪ್ರತಿನಿತ್ಯ ಕಾಯುವ ಪರಿಸ್ಥಿತಿ ಇದೆ. ಇನ್ನೂ ಸರ್ಕಾರಿ ಶಾಲೆಯ ಬಿಸಿಯೂಟದ ಯೋಜನೆಗೆ ನೀರಿನ ಕೊರತೆ ಕಂಡು ಬರುತ್ತಿದೆ.

      ಕೆಲವರು ಸೈಕಲ್‍ಗಳನ್ನು ಉಪಯೋಗಿಸಿಕೊಂಡು ಸಮೀಪದ ಕುರುಬರಪಾಳ್ಯದಿಂದ ನೀರು ತರುತ್ತಿದ್ದರೆ ಒಂದು ಕಿ.ಮೀ ನಷ್ಟು ದೂರ ತೋಟದ ಸಾಲುಗಳಲ್ಲಿ ನೀರನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಮಳೆ ಬಾರದಿದ್ದರೆ ಬೇಸಿಗೆ ಸಮಯದಲ್ಲಿ ಊರನ್ನೇ ಬಿಡಬೇಕಾಗುತ್ತದೆ ಎಂದು ಗ್ರಾಮದ ವೃದ್ಧ ಶಿವಣ್ಣ ನವರ ಅಳಲಾಗಿದೆ.

      ಇತ್ತಿಚೆಗೆ ಮಲ್ಲೇನಹಳ್ಳಿ ಗ್ರಾಮದಿಂದ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಿದ್ದರಿಂದ ಗ್ರಾಮದಲ್ಲಿ ಕೆಮ್ಮು, ಜ್ವರ ಮತ್ತಿತರ ಖಾಯಿಲೆಗಳು ಸಾರ್ವಜನಿಕರಲ್ಲಿ ಕಂಡು ಬಂದಿದ್ದರಿಂದ ಸ್ಥಳೀಯವಾಗಿ ನೀರನ್ನು ಉಪಯೋಗಿಸಲು ಮುಂದಾಗಿದ್ದಾರೆ.
ಸರ್ಕಾರದಿಂದ ಕೊರೆಸಿರುವ ಕೊಳವೆ ಬಾವಿಯಲ್ಲಿ ನೀರು ಇಂಗಿರುವುದರಿಂದ ಮತ್ತೊಂದು ಕೊಳವೆ ಬಾವಿ ಕೊರೆಸಿದರೆ ನೀರಿನ ಸಮಸ್ಯೆ ಬಗೆಹರಿಯಬಹುದೆಂದು ಮಹಿಳೆಯರ ಆಗ್ರಹವಾಗಿದೆ. 

(Visited 14 times, 1 visits today)