ತುಮಕೂರು:

      ಸಾವಿರಾರು ಮಕ್ಕಳ ಜನನಕ್ಕೆ ಕಾರಣವಾಗಿರುವ ಮಹಾತಾಯಿ ಪದ್ಮಶ್ರೀ ಡಾ|| ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಗರದಲ್ಲಿನ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡುವಂತೆ ಜಿಲ್ಲಾಡಳಿತಕ್ಕೆ ಡಿಸಿಎಂ ಪರಮೇಶ್ವರ್ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದರು.

      ವಾರ್ಡ್.12 ಗಂಗಸಂದ್ರದಲ್ಲಿ ಡಾ.ಸೂಲಗಿತ್ತಿ ನರಸಮ್ಮ ಸ್ಮಾರಕ ಶಂಕುಸ್ಥಾಪನೆ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸಾ ತಜ್ಞರಿಗಿಂತ, ಹೈಟೆಕ್ ಆಸ್ಪತ್ರೆಗಳ ಅತ್ಯಾಧುನಿಕ ಉಪಕರಣಗಳ ನೆರವಿಲ್ಲದೆ ಸಾವಿರಾರು ಹೆರಿಗೆಯನ್ನು ಯಶಸ್ವಿಯಾಗಿ ಮಾಡಿರುವ ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ವೃತ್ತ, ರಸ್ತೆ, ಪಾರ್ಕ್‍ಗೆ ನಾಮಕರಣ ಮಾಡುವಂತೆ ಈಗಾಗಲೇ ಉಪಮುಖ್ಯಮಂತ್ರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ಸೂಲಗಿತ್ತಿ ನರಸಮ್ಮ ಅವರ ಹೆಸರು ನಾಮಕರಣ ಮಾಡಲು ಶೀಘ್ರ ಕ್ರಮವಹಿಸಬೇಕಿದೆ ಎಂದು ಹೇಳಿದರು.

      ಸೂಲಗಿತ್ತಿ ನರಸಮ್ಮ ಅವರು ಈ ನಾಡಿನ ಆಸ್ತಿ, ಅವರು ಗರ್ಭೀಣಿಯರಿಗೆ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಸುಸೂತ್ರವಾಗಿ ಹೆರಿಗೆ ಮಾಡಿಸುತ್ತಿದ್ದರು, ಸೂಲಗಿತ್ತಿ ನರಸಮ್ಮ ಅವರ ಸ್ಮಾರಕ ನಾಡಿಗೆ ಮಾದರಿ ಸ್ಮಾರಕವಾಗಿ ರೂಪುಗೊಳ್ಳುವುದರ ಜೊತೆಗೆ ಸೂಲಗಿತ್ತಿ ನರಸಮ್ಮ ಅವರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸುವಂತಾಗಬೇಕೆಂದು ಆಶಿಸಿದರು.

      ಕನ್ನಡ ಪರ ಸಂಘಟನೆಗಳ ಮುಖಂಡ ಧನಿಯಾಕುಮಾರ್ ಮಾತನಾಡಿ, ಕುಗ್ರಾಮದಲ್ಲಿ ಹುಟ್ಟಿ ದೇಶವೇ ಮೆಚ್ಚುವಂತಹ ಕಾರ್ಯ ಮಾಡಿದ ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಇಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಬೇಕಿದ್ದು, ಮೊಬೈಲ್‍ಗೆ ಜೋತುಬಿದ್ದಿರುವ ಯುವ ಸಮೂಹಕ್ಕೆ ನರಸಮ್ಮ ಅವರ ಸಾಧನೆಯನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಸ್ಮಾರಕದಲ್ಲಿ ನಡೆಸಬೇಕಿದೆ, ರಸ್ತೆಗೆ ನರಸಮ್ಮ ಹೆಸರು ನಾಮಕರಣ ಹಾಗೂ ಪಾರ್ಕ್‍ನಲ್ಲಿ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಸದಸ್ಯರುಗಳು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.

      ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್ ಮಾತನಾಡಿ ಸೂಲಗಿತ್ತಿ ನರಸಮ್ಮಜ್ಜಿಯ ನೆನೆಪು ಮನೆ ಮಾತಾಗಿದ್ದು, ಅಜ್ಜಿಯ ಹೆಸರು ಸಾರ್ವಜನಿಕ ಸ್ಥಳಗಳಿಗೆ ಇಡುವ ವಿಚಾರವನ್ನು ಜ.30ರಂದು ನಡೆಯಲಿರುವ ಪ್ರಮಾಣ ವಚನ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

      ಕಾರ್ಯಕ್ರಮದಲ್ಲಿ ಹಾಸನ ಜಿ.ಪಂ ಅಧ್ಯಕ್ಷೆ ಶ್ವೇತಾ ನಾಗರಾಜ್, ಸಾಹಿತಿಗಳಾದ ಅನ್ನಪೂರ್ಣ ವೆಂಕಟನಂಜಪ್ಪ, ಬಾ.ಹ.ರಮಾಕುಮಾರಿ, ಲಕ್ಷ್ಮಣ್ ದಾಸ್, ಸ್ವಾಧೀನ್ ಕುಮಾರ್, ಪಾಲಿಕೆ ಸದಸ್ಯೆ ದೀಪಾ ಮಹೇಶ್, ಬಳ್ಳಾರಿ ವೆಂಕಮ್ಮ ಲೇಖಕಿ, ಸೂಲಗಿತ್ತಿ ನರಸಮ್ಮ ರಾಜ್ಯ ಮಹಿಳೆ, ಮಕ್ಕಳು ಮತ್ತು ಅಂಗವಿಕಲರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಎಸ್.ಶ್ರೀವಾಣಿ ವೆಂಕಟಾಚಲ ವಕೀಲರು, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ರಾಮಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತ ರಿದ್ದರು.

 

(Visited 27 times, 1 visits today)