ತುಮಕೂರು:

      ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸದೆ ಒಕ್ಕಲೆಬ್ಬಿಸಬಾರದು, ಶಾಶ್ವತ ನೆಲೆಯಾಗಿ ವೆಂಡಿಂಗ್ ಜೋನ್‍ಗ¼ನ್ನು ನಿರ್ಮಿಸಬೇಕು ಮತ್ತು ಕೂಡಲೇ ವೆಂಡಿಂಗ್ ಕಮಿಟಿ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಜಿಲ್ಲಾ ಪುಟ್‍ಪಾತ್ ವ್ಯಾಪಾರಿಗಳ ಸಂಘ ಸಿಐಟಿಯು ನೃತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

      ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಬೀದಿಬದಿ ವ್ಯಾಪಾರಿ ಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಸಭೆ ಕರೆಯಲಾಗುವುದು. ವೆಂಡಿಂಗ್ ಜೋನ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು, ಎಂಜಿ.ರಸ್ತೆಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಬದ್ದವಾಗಿದೆ ಎಂದು ಭರವಸೆ ನೀಡಿದರು.

      ಇದಕ್ಕೂ ಮೊದಲು ಪ್ರತಿಭಟನಾಕಾರರನ್ನ ಉದ್ದೇಶಿಸಿ ಮಾತನಾಡಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಕೇಂದ್ರದ ಕಾಯ್ದೆ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳಂತೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡುವ ಮತ್ತು ಬದುಕುವ ಹಕ್ಕನ್ನು ನೀಡಿದೆ. ಅವರು ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲೇ ಗುರುತಿಸಿ ಗುರುತಿನ ಚೀಟಿ ನೀಡುವ ಕರ್ತವ್ಯವನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ ಎಂದರು.

      ಕೆಲವೆಡೆ ಗುರುತಿನ ಚೀಟಿ ನೀಡಿದ್ದರೂ ನವೀಕರಿಸಿಲ್ಲ. ಗುರುತಿನ ಚೀಟಿ ಇರುವ ಪುಟ್‍ಪಾತ್ ವ್ಯಾಪಾರಿ ಗಳನ್ನು ಪುನರ್ ವಸತಿ ಕಲ್ಪಿಸದೆ ದೌರ್ಜನ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಇದು ನಿಲ್ಲಬೇಕು. ಲಾಕ್‍ಡೌನ್ ನಿಂದಾಗಿ ವ್ಯಾಪಾರ ಕಳೆದುಕೊಂಡು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

      ವೆಂಡಿಂಗ್ ಸಮಿತಿ ಸದಸ್ಯ ವಸೀಂ ಅಕ್ರಂ ಮಾತನಾಡಿ ಬೀದಿಬದಿ ವ್ಯಾಪಾರಿಗಳ ಪ್ರಶ್ನೆಯನ್ನು ಬೀದಿಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರಿಗಳ ಸಮಿತಿಯಲ್ಲಿ ಕಡ್ಡಾಯವಾಗಿ ಚರ್ಚಿಸಿ ಕ್ರಮಕ್ಕೆ ಮುಂದಾಗಬೇಕು. ಪಟ್ಟಣ ವ್ಯಾಪಾರಿಗಳ ಸಮಿತಿ ಸಭೆಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಕರೆಯಬೇಕು ಒತ್ತಾಯಿಸಿದರು.

      ಬೀದಿ ಬದಿ ವ್ಯಾಪಾರಿಗಳಿಗೆ ಹಿಂದಿನ ಯುಪಿಎ ಸರ್ಕಾರ ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಕಾಯಿದೆ ರೂಪಿಸಿತು. ನಂತರ ಎನ್‍ಡಿಎ ಸರ್ಕಾರ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರನ್ನು ಆಯ್ಕೆಗೆ ಅನುಮತಿ ನೀಡಿತು. ಸಮಿತಿ ಸಮಸ್ಯೆ ಬಗೆಹರಿಸುತ್ತಿದೆ. ವ್ಯಾಪಾರಿಗಳಿಗೆ ಪೊಲೀಸರು ಕಿರುಕುಳ ನೀಡುವುದನ್ನು ತಡೆಗಟ್ಟಬೇಕು ಎಂದರು. ಶಾಸನಬದ್ಧವಾಗಿ ಕಾರ್ಯ ರೂಪಿಸಬೇಕು.
ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯ ಜಿ.ಜಗದೀಶ್ ಮಾತನಾಡಿ, ನಗರದ ಬೆಳವಣಿಗೆ ಹಿನ್ನೆಲೆಯಲ್ಲಿ ನಗರದ ಎಂಟು ದಿಕ್ಕುಗಳಲ್ಲಿ ಬೀದಿಬದಿ ವ್ಯಾಪಾರಿಗಳ ವಲಯಗಳ ನಿರ್ಮಾಣಕ್ಕೆ ಸ್ಮಾರ್ಟ್‍ಸಿಟಿಯಿಂದ ಕನಿಷ್ಠ 15 ಕೋಟಿ ರೂ ಮೀಸಲಿಡಬೇಕು ಎಂದು ಮನವಿ ಮಾಡಿದರು.

     ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯ ಎನ್. ಮುತ್ತುರಾಜ್, ರವಿಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕೃಷ್ಣಮೂರ್ತಿ, ಚಾಂದ್‍ಪಾಷ, ವಿಶ್ವಪ್ರಭಾ, ತಬ್ರೇಜ್‍ಪಾಷ ಇತರರು ಉಪಸ್ಥಿತರಿದ್ದರು.

(Visited 19 times, 1 visits today)