ಫುಡ್ ಪಾರ್ಕ್ ಅಭಿವೃದ್ಧಿಗೆ ಒತ್ತು – ಕೇಂದ್ರ ಸಚಿವ ರಮೇಶ್ವರ ತೆಲಿ

ತುಮಕೂರು :

      ಫುಡ್ ಪಾರ್ಕ್‍ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಆಹಾರ ಸಚಿವ ರಮೇಶ್ವರ ತೆಲಿ ತಿಳಿಸಿದರು.

      ತುಮಕೂರು ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್ ಪಾರ್ಕ್‍ಗೆ ಬುಧವಾರ ಭೇಟಿ ನೀಡಿ, ಅಲ್ಲಿ ತಯಾರಾಗುವ ಉತ್ಪನ್ನಗಳ ಮಾಹಿತಿ ಪಡೆದು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

      ಫುಡ್ ಪಾರ್ಕ್‍ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸ್ವತಃ ಮೋದಿಯವರೇ ತುಮಕೂರು ಫುಡ್ ಪಾರ್ಕ್‍ಗೆ ಚಾಲನೆ ನೀಡಿದ್ದು, ಅವರ ನಿರ್ದೇಶನದಂತೆ ತುಮಕೂರು ಸೇರಿದಂತೆ ದೇಶದ ಎಲ್ಲಾ ಫುಡ್ ಪಾರ್ಕ್‍ಗಳನ್ನು ನೂತನ ತಂತ್ರಜ್ಞಾನದ ಮೂಲಕ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.

      ಫುಡ್ ಪಾರ್ಕ್‍ನಿಂದ ತುಮಕೂರು ಸುತ್ತಮುತ್ತಲಿನ ರೈತರಿಗೆ ಹಾಗೂ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಪಾರ್ಕ್‍ನಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ, ಸ್ಥಳೀಯ ರೈತರ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಿ, ಅವರನ್ನು ಆರ್ಥಿಕ ಸದೃಢರನ್ನಾಗಿ ಮಾಡಬೇಕು. ಇದಕ್ಕಾಗಿ ಪಾರ್ಕ್‍ನ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

      ಸ್ಥಳೀಯ ರೈತರಿಂದ ಗುಣಮಟ್ಟದ ಉತ್ಪನಗಳು ಲಭ್ಯವಾಗುತ್ತಿಲ್ಲ. ಹಾಗಾಗಿ ಅವರ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ಗುಣಮಟ್ಟ ಉತ್ಪನ್ನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರಿದೆ. ಈ ನಿಟ್ಟಿನಲ್ಲಿ ಪಾರ್ಕ್‍ನಿಂದಲೇ ರೈತರಿಗೆ ಗುಣಮಟ್ಟದ ಉತ್ಪನ್ನ ನೀಡುವ ಬಗ್ಗೆ ತರಬೇತಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ, ಸಾವಯುವ ಉತ್ಪನ್ನಗಳನ್ನು ಹೆಚ್ಚಿಸುವಂತೆಯೂ ನಿರ್ದೇಶಿಸಲಾಗಿದೆ ಎಂದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, `ಜಿಲ್ಲೆಯಲ್ಲಿಯೇ ಸೂಕ್ತ ತರಬೇತಿ ಕೇಂದ್ರ ಪ್ರಾರಂಭಿಸಿ ಸ್ಥಳೀಯ ರೈತರು ಗುಣಮಟ್ಟದ ಉತ್ಪನ್ನ ತಯಾರಿಸುವ ಬಗ್ಗೆ ತರಬೇತಿ ನೀಡಬೇಕು. ಜತೆಗೆ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಫುಡ್ ಕೋರ್ಟ್‍ನ ಸಿಇಒ ಸಂಜಯ್ ಮಾಲ್ಪನಿ, ಸಂಪನ್ಮೂಲ ಅಧಿಕಾರಿ ಕಿರಣ್ ಸೇರಿದಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಸದಸ್ಯರು ಇದ್ದರು.

(Visited 6 times, 1 visits today)

Related posts

Leave a Comment