ತುಮಕೂರು:

      ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. 

      ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ವಿವಿಧ ಸಂಘಟನೆಗಳ ನೂರಾರು ಮಂದಿ ಅತ್ಯಾಚಾರಿಗೆ ಈ ಕೂಡಲೇ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

      ಕಳೆದ ಮೂರು ದಿನಗಳ ಹಿಂದೆ ನಗರದ ಈದ್ಗಾ ಮೊಹಲ್ಲಾ ಚಾಂದಿನಿ ಚೌಕ್‍ನಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಸ್ರುಲ್ಲಾ ಖಾನ್ ಎಂಬ ಆರೋಪಿ ಅತ್ಯಾಚಾರವೆಸಗಿದ್ದು, ಈ ಘಟನೆಯಿಂದ ಸದರಿ ಬಾಲಕಿ ಮತ್ತು ಕುಟುಂಬದವರು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ. ಆದ್ದರಿಂದ ಸದರಿ ಬಾಲಕಿ ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆರೋಪಿಗೆ ಯಾವುದೇ ರೀತಿಯ ಕರುಣೆ, ದಯೆ ತೋರದೆ ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

      ನ್ಯಾಯಾಲಯವು ಆರೋಪಿಗೆ ಕೊಡುವ ಶಿಕ್ಷೆಯಿಂದ ಅಥವಾ ತೀರ್ಪಿನಿಂದ ಮುಂದಿನ ದಿನಗಳಲ್ಲಿ ಯಾರೂ ಸಹ ಇಂತಹ ನೀಚ ಕೃತ್ಯವೆಸಗಲು ಭಯಭೀತರಾಗಬೇಕು. ಇಂಥ ನೀಚರಿಗೆ ಇದೊಂದು ಎಚ್ಚರಿಕೆಯ ಸಂದೇಶವಾಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

      ಈ ಹಂತದಲ್ಲಿ ತೀವ್ರ ಉದ್ವೇಗಕ್ಕೆ ಒಳಗಾದ ಪ್ರತಿಭಟನಾಕಾರರು ಈ ಕೂಡಲೇ ಅತ್ಯಾಚಾರಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಟ್ಟು ಹಿಡಿದರು. ಪರಿಸ್ಥಿತಿಯನ್ನು ಅರಿತ ಪೊಲೀಸರು ಪ್ರತಿಭಟನಾಕಾರರಿಗೆ ಮನವೊಲಿಸುವ ಪ್ರಯತ್ನ ನಡೆಸಿದರು.

      ಪ್ರತಿಭಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಯಾವುದೇ ಕಾರಣಕ್ಕೂ ಈ ನೀಚ ಕೃತ್ಯವೆಸಗಿರುವ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಅತ್ಯಾಚಾರಿಗಳಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.

      ಶಾಸಕರ ಭರವಸೆಯ ಮಾತುಗಳಿಂದ ಸಮಾಧಾನಗೊಂಡ ಪ್ರತಿಭಟನಾಕಾರರು ಅತ್ಯಾಚಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಗೆ ಮತ್ತು ಆಕೆಯ ಕುಟುಂಬ ವರ್ಗದವರಿಗೆ ನ್ಯಾಯ ಕೊಡಿಸಲೇಬೇಕು ಎಂದು ಮನವಿ ಮಾಡಿದರು.

      ಪ್ರತಿಭಟನೆ ನಡೆದ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನಿಸಾರ್ ಅಹಮದ್, ಸೈಯದ್ ಬಹರುಹಾನುದ್ದೀನ್, ಮೊಹಮ್ಮದ್ ಆಸೀಫ್, ಸಿದ್ದೀಕ್ ಅಹಮದ್, ಜೀಯ್ ಉಲ್ಲಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

(Visited 16 times, 1 visits today)