ಶಿವಮೊಗ್ಗ:

      ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಲತಾ ಗಣೇಶ್, ಉಪ ಮೇಯರ್ ಆಗಿ ಚನ್ನಬಸಪ್ಪ ಆಯ್ಕೆಯಾಗುವ ಮೂಲಕ ಬಿಜೆಪಿ ತೆಕ್ಕೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಒಲಿದಿದೆ.

      ಒಟ್ಟು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2, ಪಕ್ಷೇತರರು 5, ಎಸ್.ಡಿ.ಪಿ.ಐ 1 ಸ್ಥಾನ ಗಳಿಸಿತ್ತು. ಇದಲ್ಲದೆ ಇಬ್ಬರು ಬಿಜೆಪಿಯ ಶಾಸಕರು ಹಾಗೂ ಇಬ್ಬರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಹಾಗೂ ಒರ್ವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 40 ಸದಸ್ಯರಿಗೆ ಮತ ಚಲಾವಣೆಗೆ ಅವಕಾಶವಿದ್ದು ಪಾಲಿಕೆ ಅಧಿಕಾರ ಹಿಡಿಯಲು ಕನಿಷ್ಟ 21 ಸದಸ್ಯರ ಬೆಂಬಲ ಬೇಕಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ 20 ಪಾಲಿಕೆ ಸದಸ್ಯರ ಜೊತೆಗೆ ನಾಲ್ವರು ಬಿಜೆಪಿಯ ಶಾಸಕರು, ಮೂವರು ಪಕ್ಷೇತರ ಸದಸ್ಯರ ಬೆಂಬಲ ಸೇರಿ ಸದಸ್ಯ ಬಲ 27 ಕ್ಕೆ ತಲುಪಿ ನಿಚ್ಚಳ ಬಹುಮತ ಪಡೆಯಲು ಸಹಕಾರಿಯಾಯಿತು.

      ಬಿಜೆಪಿ ಎಂಎಲ್ ಸಿ ಅಯನೂರು ಮಂಜುನಾಥ ಗೈರು ಹಾಜರಾದ ಹಿನ್ನಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಹಾಜರಿದ್ದ 39 ಸದಸ್ಯರ ಪೈಕಿ 26 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ತೆಕ್ಕೆಗೆ ಜಾರಿತು. ಇನ್ನೂ ಕಾಂಗ್ರೆಸ್’ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಶಿವಣ್ಣ, ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಚ್.ಸಿ. ಯೋಗೇಶ್ ತಲಾ 12 ಮತಗಳನ್ನು ಪಡೆದು ಪರಾಭವಗೊಂಡರು. ನಂತರ ಬಿಜೆಪಿ ವತಿಯಿಂದ ಶಿವಮೊಗ್ಗ ನಗರದಾದ್ಯಂತ ವಿಜಯೋತ್ಸವದ ಮೆರವಣಿಗೆ ನಡೆಸಲಾಯಿತು.

(Visited 14 times, 1 visits today)