ತುಮಕೂರು:

      ಜಿಲ್ಲೆಯ ಪ್ರತಿ ಮನೆ-ಮನೆಗಳಿಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಜನರಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಇಂದಿನಿಂದ ಜನರಿಗೆ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ಅವರು ಸೂಚಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಆರೋಗ್ಯ ಟಾಸ್ಕ್‍ಪೊರ್ಸ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಐಇಸಿ ಕಾರ್ಯಕ್ರಮಗಳನ್ನು ಹೆಚ್ಚು ಜನರನ್ನು ಸೇರಿಸಿ ಮಾಡಲು ಸಾಧ್ಯವಿಲ್ಲದ ಕಾರಣ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರತಿ ಮನೆಗೆ ತೆರಳಿ ಕರೊನಾ ಮುಂಜಾಗ್ರತಾ ಕ್ರಮಗಳ ಕುರಿತ ಕರಪತ್ರಗಳನ್ನು ಎಚ್ಚರಿಕೆಯಿಂದ ಹಂಚುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿಹೆಚ್‍ಓ ಡಾ||ಬಿ.ಆರ್.ಚಂದ್ರಿಕಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಅವರಿಗೆ ಸೂಚನೆ ನೀಡಿದರು.

      ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ನಾವು ಹೊರಡಿಸುವ ಆದೇಶವನ್ನು ಎಲ್ಲಾ ವ್ಯಕ್ತಿಗಳು ಪಾಲನೆ ಮಾಡಬೇಕು. ಕಾರ್ಯಕ್ರಮ ಅಧಿಕಾರಿಗಳು ಈಗಾಗಲೇ ವಿದೇಶದಿಂದ ಜಿಲ್ಲೆಗೆ ಬಂದಂತಹ ಒಟ್ಟು 83 ಜನರ ಮೇಲೆ ನಿಗಾ ವಹಿಸಿದ್ದು, ಈ ವ್ಯಕ್ತಿಗಳು ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪಟ್ಟಿಯನ್ನು ಸಂಗ್ರಹಿಸಬೇಕು ಎಂದು ಕಾರ್ಯಕ್ರಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಿದ್ಧಾರ್ಥ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜುಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು 100 ಬೆಡ್‍ಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ ಅವರು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟರಿ ವಸ್ತುಗಳನ್ನು ಎಂಆರ್‍ಪಿ ದರದಲ್ಲಿ ಮಾರಾಟ ಮಾಡದೇ ಉಲ್ಲಂಘನೆ ಮಾಡಿದರೆ ಅದನ್ನು ತಡೆಯಲು ಜಿಲ್ಲೆಯಲ್ಲಿ ಕಾನೂನು ಮಾಪನ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು 13 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

      ಶ್ರೀ ಸಿದ್ಧಗಂಗಾ ಮಠದಲ್ಲಿ 4 ಜನ ವೈದ್ಯಕೀಯ ಸಿಬ್ಬಂದಿಯನ್ನು ಈಗಾಗಲೇ ನೇಮಿಸಿದ್ದು, ಪ್ರತಿದಿನ ಮಕ್ಕಳ ಥರ್ಮಲ್ ಸ್ಕ್ಯಾನ್ ಮಾಡಲು ಸೂಚಿಸಲಾಗಿದೆ. ಶ್ರೀ ಮಠಕ್ಕೆ ಪ್ರತಿದಿನ ಖುದ್ದಾಗಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಹಾಗೂ ಡಿಹೆಚ್‍ಓ ಚಂದ್ರಿಕಾ ಅವರಿಗೆ ಸೂಚನೆ ನೀಡಿದರು.

      ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಟೇಬಲ್‍ಗಳನ್ನು ಐಪೋಕ್ಲೋರೈಡ್(ಬ್ಲೀಚಿಂಗ್ ಪೌಡರ್) ಒಂದು ಲೀಟರ್‍ಗೆ 30ಗ್ರಾಂ ಹಾಕಿ ಶುಚಿಗೊಳಿಸುವಂತೆ ಹಾಗೂ ಎಲ್ಲಾ ಹೋಟೆಲ್‍ಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಬೇಕು ಎಂದು ಅಬಕಾರಿ ಇಲಾಖೆಯ ಅಧಿಕಾರಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಸಾರ್ವಜನಿಕರು ಹೆಚ್ಚಾಗಿ ಸೇರುವ ಮುಖ್ಯ ಕಛೇರಿಗಳಲ್ಲಿ ಕೊರೊನಾ ಕುರಿತ ಮುಂಜಾಗ್ರತಾ ಕ್ರಮಗಳ ಅನುಸರಿಸುವ ಬಗ್ಗೆ ಚಿಕ್ಕ-ಚಿಕ್ಕ ಪೋಸ್ಟರ್‍ಗಳನ್ನು ಅಂಟಿಸಬೇಕು. ಸರ್ಕಾರದ ಆದೇಶದಂತೆ ಈಗಾಗಲೇ ಮಾಲ್, ಇನ್ನಿತರೆ ಜನ ಸೇರುವ ಪ್ರದೇಶಗಳನ್ನು ನಿಷೇಧಿಸಿದೆ. ಕೊರೊನಾ ಸಂಬಂಧಿತ ಮಾಹಿತಿಗಾಗಿ ಕಂಟ್ರೋಲ್ ರೂಮ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

      ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳಿಗೆ ಪಾವಗಡ, ಶಿರಾ, ಮಧುಗಿರಿ ತಾಲ್ಲೂಕುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಹಾಗೂ ಕರೊನಾ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರಲ್ಲದೆ ಕೆಎಸ್‍ಆರ್‍ಟಿಸಿ ಬಸ್ ಒಳಗಡೆ ಕಂಡಕ್ಟರ್‍ಗಳು ಪ್ರಯಾಣಿಕರಿಗೆ ಕರೊನಾ ಕುರಿತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಅರಿವು ಮೂಡಿಸಲು ಪ್ರಯತ್ನ ಮಾಡಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಅವರಿಗೆ ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ವಿ.ಅಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ವೀರಭದ್ರಯ್ಯ, ಡಾ||ಚೇತನ್, ಡಾ||ಮಹಿಮಾ, ಡಾ||ಕೇಶವ್‍ರಾಜ್, ಕಾರ್ಯಕ್ರಮ ಅಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು.

(Visited 14 times, 1 visits today)