ತುಮಕೂರು :

      ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದ್ದು ಎಲ್ಲರೂ ಸಂವಿಧಾನಕ್ಕೆ ಅನುಸಾರವಾಗಿ ನಡೆದುಕೊಂಡು ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ಜರುಗುತ್ತಲೇ ಇವೆ. 1990ರ ಕಾಯಿದೆಯಂತೆ ಮಾನವ ಹಕ್ಕುಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ತಿದ್ದುಪಡಿ ಕಾಯ್ದೆಯಲ್ಲಿ ಜನರು ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ಕೇಳಿದರೆ ಸಾಲದು. ಕರ್ತವ್ಯಗಳನ್ನು ಕೂಡ ಅರಿಯಬೇಕು ಎಂದರು.

      ತುಮಕೂರು ಜಿಲ್ಲೆಯಲ್ಲಿ ಕೇವಲ 3 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ಈ ಪೈಕಿ 1 ಪ್ರಕರಣ ಇತ್ಯರ್ಥಪಡಿಸಿದ್ದು, ಇನ್ನು 2 ಪ್ರಕರಣಗಳಿಗೆ ಉಚ್ಛನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಲಾಗಿದೆ. ಈ ಪ್ರಕರಣಗಳನ್ನು ನೋಡಿದರೆ, ತುಮಕೂರು ಜಿಲ್ಲೆಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿಲ್ಲವೆ ಎಂದು ಪ್ರಶ್ನಿಸಿದರು.

      ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿವೆ. ನಾವು ಸಂವಿಧಾನಕ್ಕೆ ರೀತಿ ನಿಯಮವಾಗಿ ನಡೆದುಕೊಂಡರೆ ಸಾಕು ಯಾವುದೇ ರೀತಿಯಾದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಒಬ್ಬ ವೈರಿಯನ್ನು ನೇರವಾಗಿ ಎದುರಿಸಬಹುದು ಏಕೆಂದರೆ ಅವರು ಯಾರು ಎಂದು ಗೊತ್ತಿರುತ್ತದೆ. ಆದರೆ ಆಂತರಿಕ ಶಕ್ತಿಗಳ ಬಗ್ಗೆ ಗೊತ್ತಾಗುವುದಿಲ್ಲ. ಇದರಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ವಿ.ಗೋಪಿನಾಥ್, ವಿದ್ಯೋದಯ ಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೋ|| ಕೆ.ವೆಂಕಟಾಚಲಪತಿ ಸ್ವಾಮಿ ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷಕ ಜೆ.ಕೆ. ಅನಿಲ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ “ಮಾನವ ಹಕ್ಕುಗಳ ಮಹತ್ವ ಹಾಗೂ ಅದರ ಅನುಷ್ಠಾನ” ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

(Visited 48 times, 1 visits today)