ಮುಚ್ಚಿಟ್ಟ ಇತಿಹಾಸವನ್ನು ಅರಿಯಬೇಕಿದೆ: ಗುಣಶೀಲ

 ತುಮಕೂರು:

      ಭಾರತದಲ್ಲಿ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದು ಡಾ.ಬಿ.ಅಂಬೇಡ್ಕರ್ ಅವರೊಬ್ಬರೆ, ಅವರ ಸಾಹಿತ್ಯ, ಪುಸ್ತಕಗಳನ್ನು ಓದುವ ಮೂಲಕ ಈ ನೆಲದ ಮುಚ್ಚಿಟ್ಟ ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಯುವ ಸಮೂಹ ಮಾಡಬೇಕಿದೆ ಎಂದು ಉಪನ್ಯಾಸಕ ಗುಣಶೀಲ ಅಭಿಪ್ರಾಯಪಟ್ಟರು.

      ನಗರದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನಲ್ಲಿ ನಡೆದ ಸಾವಿತ್ರಿ ಬಾ ಫುಲೆ ಅವರ ಜನ್ಮ ಜಯಂತಿಯಲ್ಲಿ ಮಾತನಾಡಿದ ಅವರು ಇಂದು ಎಲ್ಲರೂ 40 ವರ್ಷಗಳ ಇತಿಹಾಸಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ, ಅದಕ್ಕಿಂತಲೂ ಹಿಂದೆ ಅಡಗಿರುವ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ, ಅಂಬೇಡ್ಕರ್ ಅವರು ಮುಚ್ಚಿಟ್ಟ ಇತಿಹಾಸವನ್ನು ಶೋಧಿಸಿದಲೇ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಅವರ ಬಗ್ಗೆ ನಾವೆಲ್ಲ ಇಂದು ತಿಳಿದುಕೊಳ್ಳುವಂತಾಗಿದ್ದು ಎಂದರು.

      ಅಂಬೇಡ್ಕರ್ ಅವರಿಗೆ ದಲಿತರ ಸ್ವಾಭಿಮಾನದ ವಿಜಯೋತ್ಸವದ ಸಂಕೇತವಾಗಿರುವ ಕೋರೆಗಾಂವ ಘಟನೆ ಬಗ್ಗೆ ಗೊತ್ತಿರಲಿಲ್ಲ, ನಮ್ಮ ಇತಿಹಾಸದಲ್ಲಿಯೂ ಅದರ ಉಲ್ಲೇಖವಿರಲಿಲ್ಲ, ಅಂಬೇಡ್ಕರ್ ಅವರು ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್‍ಗೆ ಹೋಗಿದ್ದಾಗ, ಅಲ್ಲಿ ಬ್ರಿಟಿಷ್ ಅಧಿಕಾರಿ ಬರೆದಿದ್ದ ಇತಿಹಾಸ ಪುಸ್ತಕದಲ್ಲಿ ಭೀಮಾ ಕೋರೆಗಾಂವದ ಬಗ್ಗೆ ಉಲ್ಲೇಖವಿರುವುದನ್ನು ನೋಡಿ, ಭಾರತಕ್ಕೆ ಮರಳಿದ ಆ ಪ್ರದೇಶವನ್ನು ಹುಡುಕಿಕೊಂಡು ಹೋಗಿ, ಆ ಪ್ರದೇಶದ ಇತಿಹಾಸವನ್ನು ತಿಳಿಸಿದರು, ಅಂತಹ ಅದೆಷ್ಟೋ ಇತಿಹಾಸಗಳು ಇಂದಿಗೂ ಮುಚ್ಚಿಟ್ಟಿವೆ ಎಂದು ಹೇಳಿದರು.

      ದೇಶದ ಶೂದ್ರಾತಿಶೂದ್ರರಿಗೆ ಅಕ್ಷರವನ್ನು ಕಲಿಸಿದ ಅಕ್ಷರದವ್ವ ಸಾವಿತ್ರಿ ಬಾ ಫುಲೆ ಅವರು, ಜ್ಯೋತಿಬಾಫುಲೆ ಅವರಿಂದ ಪ್ರೇರಿತರಾಗಿ ಮೌಢ್ಯದಿಂದ ಹೊರಬಂದು ಮಹಿಳೆಯರಿಗೆ ಅಕ್ಷರವನ್ನು ಕಲಿಸಿದರ ಪರಿಣಾಮವಾಗಿಯೇ ಇಂದು ಮಹಿಳೆಯರಲ್ಲಿ ಯೋಚಿಸುವ ಶಕ್ತಿ ಬಂದಿದೆ, ಮಹಿಳೆಯರಿಗೆ ಶಿಕ್ಷಣವನ್ನು ಕಲಿಸಲು ಮುಂದಾದ ಸಾವಿತ್ರಿಬಾಫುಲೆ ಅವರನ್ನು ಉನ್ನತ ವರ್ಗದವರು ಅವಾಚ್ಯವಾಗಿ ನಿಂದಿಸಿದರು, ಅವಮಾನಿಸಿದರು ಎದೆಗುಂದದೆ ಹಳ್ಳಿ ಹಳ್ಳಿಗಳನ್ನು ತಿರುಗಿ ಶಿಕ್ಷಣವನ್ನು ನೀಡಿದರು, ಅಂತಹ ಮಹಾನ್ ಚೇತನದ ಹೋರಾಟವನ್ನು ಗುರುತಿಸಿ ಅಂಬೇಡ್ಕರ್ ಅವರು ಎಲ್ಲರಿಗೂ ಉಚಿತ ಶಿಕ್ಷಣವನ್ನು ಸಂವಿಧಾನದತ್ತವಾಗಿ ನೀಡಿದರು ಎಂದರು.

      ರಾಜಾಶ್ರಯದ ವಿರೋಧದ ನಡುವೆ, ಪೇಶ್ವೆಗಳ ಅವಮಾನವನ್ನು ಸಹಿಸಿ, ವಿಕೃತ ಮನಸ್ಸಿನವರ ವಿರೋಧ ಕಟ್ಟಿಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಿ, ಶೂದ್ರರ ಕಲಿಕೆಗೆ ಅಡಿಪಾಯವನ್ನು ಹಾಕಿದ ಸಾವಿತ್ರಿಬಾಫುಲೆ ಅವರು, ಇಂದು ಹೆಣ್ಣು ಮಕ್ಕಳ ಕಲಿಕೆಗೆ ಕಾರಣವಾಗಿದ್ದಾರೆ, ಅಕ್ಷರ ಕಲಿಸಿದ ಅಕ್ಷರದವ್ವನ ಜನ್ಮದಿನವನ್ನು ನಾವು ನಿಜವಾದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು, ಆದರೆ ನಮ್ಮಲ್ಲಿ ಅವೈಜ್ಞಾನಿಕ ಆಚರಣೆಗಳೇ ಜಾಸ್ತಿ ಎಂದು ತಿಳಿಸಿದರು.

      ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನ ನಾಗರಾಜ್ ಅವರು ಮಾತನಾಡಿ ಬ್ರಿಟಿಷರ ಆಗಮನದ ನಂತರ ಶೂದ್ರರಿಗೆ ಶಿಕ್ಷಣ ಅವಕಾಶ ದೊರೆಯಿತು, ಮನು ವರ್ಣ ವ್ಯವಸ್ಥೆಗೆ ಅಂಟಿಕೊಂಡು ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಕಲಿಸುವ ಮೂಲಕ ಸಾವಿತ್ರಿಬಾಫುಲೆ ಶಿಕ್ಷಿತ ಸಮುದಾಯವನ್ನು ಹುಟ್ಟುಹಾಕಿದರು, 1840ರಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರದ ಅವರು, 1851ರಲ್ಲಿ ಅಸ್ಪøಶ್ಯರಿಗಾಗಿ ಶಾಲೆ ಹಾಗೂ ವಿದ್ಯಾರ್ಥಿನಿಲಯವನ್ನು ಹುಟ್ಟುಹಾಕುವ ಮೂಲಕ ದಲಿತರ ಏಳ್ಗೆಗೆ ಕಾರಣರಾದರು, ದಲಿತರನ್ನು, ಹೆಣ್ಣು ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿಯೇ ವಿಧವೆಯರಿಗೆ ಶಾಲೆ ಹಾಗೂ ವಿಧವಾ ಗೃಹಗಳನ್ನು ಹುಟ್ಟುಹಾಕಿ ಶಿಕ್ಷಣವನ್ನು ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಕಾಂತ್, ಮಂಜುನಾಥ್, ರಾಜಣ್ಣ ಸೇರಿದಂತೆ ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

(Visited 38 times, 1 visits today)

Related posts