ಬೆಂಗಳೂರು: 

      ಸಮ್ಮಿಶ್ರ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ಸಂಜೆ ನಿಗದಿಯಂತೆ ನಡೆದಿದ್ದು, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ರಾಜ್ಯಪಾಲ ವಜುಭಾಯಿ​ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

      ಮೊದಲಿಗೆ ಎಂ.ಬಿ. ಪಾಟೀಲ್​ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಆರ್​.ಬಿ. ತಿಮ್ಮಾಪುರ ; ಮೂರನೆಯವರಾಗಿ ಸತೀಶ್​ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್. ಶಿವಳ್ಳಿ, ಐದನೆಯವರಾಗಿ ಪಿ.ಟಿ. ಪರಮೇಶ್ವರ್​ನಾಯ್ಕ್​ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್​ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್​ ಪ್ರಮಾಣ ವಚನ ಸ್ವೀಕರಿಸಿದರು.

      ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜತೆಗೆ ಸಂಪುಟದಲ್ಲಿ ಖಾಲಿ ಇದ್ದ 6 ಸ್ಥಾನಗಳ ಭರ್ತಿಗೆ ತೀರ್ಮಾನ ಆಗಿರುವುದರಿಂದ ಈಗ ಒಟ್ಟು 8 ಮಂದಿ ಹೊಸಬರು ಸೇರ್ಪಡೆಗೆ ಅವಕಾಶ ದೊರೆತಿದೆ. ರಮೇಶ್‌ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ ಸತೀಶ ಜಾರಕಿಹೊಳಿ, ಆರ್‌.ಶಂಕರ್‌ ಸ್ಥಾನಕ್ಕೆ ಕುಂದಗೋಳು ಶಾಸಕ ಕುರುಬ ಸಮುದಾಯ ಸಿ.ಎಸ್‌.ಶಿವಳ್ಳಿ ನೇಮಕಗೊಂಡಿದ್ದಾರೆ.

      ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ, ಸಂಸದ ವೀರಪ್ಪ ಮೊಯ್ಲಿ, ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದ ಅಂಗವಾಗಿ ರಾಜಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

 

 

(Visited 27 times, 1 visits today)