ತುಮಕೂರು:

      ಮೊದಲು ನಮ್ಮ ಮನಸ್ಥಿತಿ ಬದಲಾಯಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಂಘ(ರಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಬಾಲಭವನದಲ್ಲಿಂದು ಏರ್ಪಡಿಸಿದ್ದ “ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ”ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾತ್ಮರ ದಿನವನ್ನು ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಅವರ ಜೀವನಾದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡಾಗ ಮಾತ್ರ ಆಚರಣೆ ಸಾರ್ಥಕವಾಗುತ್ತದೆ ಎಂದರಲ್ಲದೆ, ಕನಿಷ್ಟ ಚಿಂತನೆಗಳು ಸಮಾಜದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ತತ್ವ ರಹಿತ ರಾಜಕೀಯ, ಕೆಲಸವಿಲ್ಲದ ಸಂಪಾದನೆ, ಪ್ರಜ್ಞೆಯಿಲ್ಲದ ಸುಖ, ಗುಣವಿಲ್ಲದ ಜ್ಞಾನ, ನೈತಿಕತೆಯಿಲ್ಲದ ವಾಣಿಜ್ಯ, ತ್ಯಾಗವಿರದ ಪೂಜೆಯು ಮೌಲ್ಯರಹಿತ ಸಮಾಜವನ್ನು ಸೃಷ್ಟಿ ಮಾಡುತ್ತದೆ ಎಂಬ ಗಾಂಧೀ ವಿಚಾರ ಧಾರೆಗಳ ಮೇಲೆ ಬೆಳಕು ಚೆಲ್ಲಿದರು.

      ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಮಾತನಾಡಿ, ಸತ್ಯ ಹಾಗೂ ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಕಿಸಿಕೊಟ್ಟಿದ್ದಾರೆ. ಗಾಂಧೀಜಿಯವರ ಸತ್ಯ, ಅಹಿಂಸೆಯಲ್ಲದೆ ತ್ಯಾಗ, ಸರಳತೆ, ಸ್ವಚ್ಛತೆ, ಸೌಹಾರ್ದತಾ ತತ್ವಗಳು ಇಡೀ ಮಾನವ ಜಗತ್ತಿಗೆ ಆದರ್ಶವಾಗಿವೆ. ಗಾಂಧೀಜಿಯ ಕನಸನ್ನು ನನಸು ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕೆಂದು ತಿಳಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಸ್ವಚ್ಛ ಭಾರತ್ ಯೋಜನೆಯಡಿ ಇಡೀ ರಾಜ್ಯದಲ್ಲಿ 18 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಘನ ತ್ಯಾಜ್ಯ ವಿಲೇವಾರಿಗೆ ಕಂದಾಯ ಇಲಾಖೆಯವರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದಲ್ಲದೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಗಾಂಧೀಜಿಯವರ ಕನಸನ್ನು ನನಸು ಮಾಡುವುದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಮಾತನಾಡಿ, ಗಾಂಧೀಜಿಯರವರ ತತ್ವಾದರ್ಶಗಳಾದ ಸತ್ಯ, ಅಹಿಂಸೆ, ಶ್ರದ್ಧೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇರೆಯವರಿಗೆ ಮಾರ್ಗದರ್ಶಿಗಳಾಗಬೇಕು ಎಂದು ತಿಳಿಸಿದರು.

      ಸಾಹಿತಿ ಹಾಗೂ ಚಿಂತಕರಾದ ಡಾ|| ರವಿಕುಮಾರ್ ನೀಹ ಅವರು ಗಾಂಧಿ ಕುರಿತು ಉಪನ್ಯಾಸ ನೀಡಿದರು.
ಜಯಂತಿ ಅಂಗವಾಗಿ ದಿಬ್ಬೂರು ಮಂಜು ಮತ್ತು ತಂಡದಿಂದ “ರಘುಪತಿ ರಾಘವ ರಾಜಾರಾಂ” ಭಜನೆ ಹಾಗೂ ಗೀತೆಗಳನ್ನು ಹಾಡಿದರು. ಅಂಗನವಾಡಿ ಮಕ್ಕಳು ಗಾಂಧೀಜಿ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಪಾಪು-ಬಾಪು ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಅವರು ವಂದಿಸಿದರು. ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಮಮತ ನಿರೂಪಿಸಿದರು.

(Visited 28 times, 1 visits today)