ತುಮಕೂರು :

      ಶುಕ್ರವಾರ ಸಂಜೆ ನಗರದ ಗಾಜಿನ ಮನೆಯಲ್ಲಿ ಅದ್ದೂರಿಯಾಗಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನ ಕಲಾತಂಡಗಳು ಪ್ರಸ್ತುತಪಡಿಸಿದ ಸಾಂಸ್ಕøತಿಕ ವೈಭವವು ಪ್ರೇಕ್ಷಕನ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಯುವಜನೋತ್ಸವ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಉದ್ಘಾಟಿಸಿದ ನಂತರ ಜರುಗಿದ ಮೂಡಬಿದರೆಯ ಆಳ್ವಾಸ್ ಪ್ರತಿಷ್ಠಾನದ ಸಾಂಸ್ಕøತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಪ್ರೇಕ್ಷಕನನ್ನು ಮೈಮರೆಯುವಂತೆ ಮಾಡಿದವು.

      ದೇಶದ ವಿವಿಧ ರಾಜ್ಯಗಳಲ್ಲದೆ ದೂರದ ಶ್ರೀಲಂಕಾ ದೇಶದ ನೃತ್ಯ ಪರಂಪರೆಗಳ ಮಿಳಿತವಾಗಿದ್ದ ಈ ಸಾಂಸ್ಕತಿಕ ವೈಭವದದಲ್ಲಿ ಉತ್ತರ ಭಾರತದ “ಕಥಕ್”ನಿಂದ ಹಿಡಿದು ದಕ್ಷಿಣ ಭಾರತದ “ಮೋಹಿನಿ ಅಟ್ಟಂ” ಹಾಗೂ ಪೂರ್ವದ ಗುಜರಾತಿನ “ದಾಂಡಿಯಾ ನೃತ್ಯ”ದಿಂದ ಹಿಡಿದು ಪಶ್ಚಿಮ ಬಂಗಾಳದ “ಪುರಲಿಯೋ ಚಾವೋ ನೃತ್ಯ”ದವರೆಗೆ ವಿವಿಧ ರಾಜ್ಯಗಳ ಕಲೆಗಳನ್ನು ಅನಾವರಣಗೊಳಿಸಲಾಯಿತು. ಮುಖ್ಯವಾಗಿ ಪ್ರದರ್ಶನಗೊಂಡ ಶ್ರೀಲಂಕಾ ಸಾಂಪ್ರಾದಯಿಕ ನೃತ್ಯ, ದಕ್ಷಿಣ ಕನ್ನಡದ ಯಕ್ಷಗಾನ, ಗುಜರಾತ್‍ನ ದಾಂಡಿಯಾನೃತ್ಯ, ಕಥಕ್, ನವರಂಗ್ ನೃತ್ಯಗಳು ಜನಾಕರ್ಷಿಸಿತು.

      ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಎಲ್ಲರ ಮನಸೆಳೆದ ಶ್ರೀಲಂಕಾದ ಸಾಂಪ್ರದಾಯಿಕ ನೃತ್ಯದಲ್ಲಿ ಅಪ್-ಕಂಟ್ರಿ (Up-country) ಹಾಗೂ ಲೋ- ಕಂಟ್ರಿ(Low-country) ನೃತ್ಯ ಪ್ರದರ್ಶನದ “ಜುಗಲ್ ಬಂದಿ” ಶ್ರೀಲಂಕಾದ ಜನರ ವೇಷ-ಭೂಷಣ, ಆಚಾರ-ವಿಚಾರ, ಅವರ ಸಂಸ್ಕøತಿಯನ್ನು ಪರಿಚಯಿಸಿತು. ಶ್ರೀಲಂಕಾದಲ್ಲಿ ಶುಭ ಸಮಾರಂಭಗಳನ್ನು ಪ್ರಾರಂಭಿಸುವ ಮುನ್ನ ತಮ್ಮ ಆರಾಧ್ಯ ದೈವ ಬುದ್ಧನಲ್ಲಿ ಪ್ರಾರ್ಥಿಸುವ ಪರಿ, ಶ್ರೀಲಂಕಾ ಹಾಗೂ ಭಾರತೀಯ ಸಂಸ್ಕøತಿಯಲ್ಲಿ ಸಾಮ್ಯತೆಯಿದೆಯೆಂದು ಈ ನೃತ್ಯ ಕಣ್ಣಿಗೆ ಕಟ್ಟಿಕೊಟ್ಟತು.  

      ನಂತರದ ಗುಜರಾತಿನ ದಾಂಡಿಯಾ ನೃತ್ಯದಲ್ಲಿ ಟಿಪ್‍ಣಿರಾಸ್ ಪ್ರಾಕಾರದಲ್ಲಿ ಯುವಕ-ಯುವತಿಯರು ನೀನಾ-ನಾನಾ ಎಂಬ ಜುಗಲ್‍ಬಂದಿ ರೀತಿಯಲ್ಲಿ ಪ್ರದರ್ಶಿಸಿದ ನೃತ್ಯವನ್ನು ನೋಡಿ ಪ್ರೇಕ್ಷಕರು ಸಂಭ್ರಮಿಸಿದರು. ನವರಾತ್ರಿ ಸಂದರ್ಭದಲ್ಲಿ ಯುವಕ-ಯುವತಿಯರು ದಾಂಡ್ಯ ಆಡಿದರೆ ಮಾತ್ರ ನವರಾತ್ರಿ ಸಂಪನ್ನನಾಗುತ್ತದೆ ಪ್ರತೀತಿಯಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

      ಮಣಿಪುರದ ಕ್ರಾಂತಿಯ ಸಂಕೇತವೆಂದೇ ಹೇಳಲಾಗುವ ಡೋಲ್ ಚಲಂ ನೃತ್ಯ ವಿಶಿಷ್ಠವಾಗಿತ್ತು. ನೃತ್ಯದೊಂದಿಗೆ ಮಣಿಪುರಿ ಗಾಯನ ಸ್ಥಳೀಯರಿಗೆ ಅರ್ಥವಾಗದಿದ್ದರೂ ತಾಳಕ್ಕೆ ತಕ್ಕಂತೆ ತಲೆತೂಗುತ್ತಿದ್ದುದು ಕಲೆಗೆ ಮಾಂತ್ರಿಕ ಶಕ್ತಿ ಇದೆ ಎಂಬುದು ಸತ್ಯವೆಂದು ಅರಿವಾಗುತ್ತದೆ. ಸಂಬಂಧ ಅನ್ನುವ ಪದ ಹುಟ್ಟುವ ಮೊದಲು ಮನುಷ್ಯ ತನ್ನ ಸುಖ-ದುಃಖ, ಸಂತೋಷಗಳನ್ನು ಚರ್ಮ ವಾದ್ಯಗಳ ಮೂಲಕ ಹಂಚಿಕೊಳ್ಳುತ್ತಿದ್ದ ಎಂದು ಶಾಸ್ತ್ರ-ಪುರಾಣಗಳಲ್ಲಿ ಉಲ್ಲೇಖವಿದೆ. ಕರ್ನಾಟಕದಲ್ಲಿ ಡೊಳ್ಳು, ದುಡಿ ಚರ್ಮ ವಾದ್ಯಗಳಂತೆ ಮಣಿಪುರದಲ್ಲಿ ಡೋಲ್‍ಚಲಂ ಎಂಬ ಚರ್ಮವಾದ್ಯವಿದ್ದು, 17-18ನೇ ಶತಮಾನದಲ್ಲಿ ಪ್ರಾರಂಭವಾದ ಭಕ್ತ ಚಳುವಳಿಯಲ್ಲಿ ಮಣಿಪುರ ವೈಷ್ಣವ ಪಂಥೀಯರು ಈ ಡೋಲನ್ನು ಕ್ರಾಂತಿಯ ಸಂಕೇತವಾಗಿ ಆಯ್ಕೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹದು.

      ಭಾರತದಲ್ಲಿ ಹಲವಾರು ನೃತ್ಯ ಪರಂಪರೆಗಳ ಪೈಕಿ ಪಶ್ಚಿಮ ಬಂಗಾಳದ ಪುರಲಿಯೋ ಛಾವೋ ಎಂಬ ನೃತ್ಯ “ಮಹಿಷಾಸುರ ಮರ್ದನ”ದ ನೆನಪು ಮಾಡಿತು. ದೇವಿಯು ಮಹಿಷಾಸುರನನ್ನು ಸಂಹಾರ ಮಾಡಲು ಸಿಂಹದ ಮೇಲೆ ಬಂದಾಗ ಸಿಂಹ ಹಾಗೂ ರಕ್ಕಸ ಮಹಿಷನ ವಾಹನ ಕೋಣದ ನಡುವೆ ನಡೆದ ಕಾಳಗವನ್ನು ಈ ನೃತ್ಯರೂಪಕದಲ್ಲಿ ಸಾದರಪಡಿಸಲಾಯಿತು. ಆಳ್ವಾಸ್ ಸಂಸ್ಥೆಯ ನಿರ್ದೇಶಕ ಮೋಹನ್ ಆಳ್ವಾ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಾಳಗವು ದಿನಗಳು ಕಳೆದರೂ ಪ್ರೇಕ್ಷಕನ ಮನಸ್ಸಿನಿಂದ ಮಾಸುವುದಿಲ್ಲ.

      ದಕ್ಷಿಣ ಕನ್ನಡದ ಸಂಸ್ಕøತಿಯನ್ನು ಸಾರುವ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಎಂಬ ಎರಡು ಪ್ರಾಕಾರದ ಯಕ್ಷಗಾನ ಪ್ರದರ್ಶನ ನಡೆಯಿತು. ಕೃಷ್ಣನನ್ನು ಪ್ರತಿನಿಧಿಸಿ ಪ್ರದರ್ಶಿಸಿದ ಬಡಗುತಿಟ್ಟು ಯಕ್ಷಗಾನದಲ್ಲಿ ಕೃಷ್ಣನ ವಿಚಾರ, ಅವನ ವೈಚಾರಿಕತೆಯನ್ನು ಕೊಂಡಾಡಿದ ಆಖ್ಯಾನವಾದರೆ, ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿ ಕೃಷ್ಣನ ಬಾಲಲೀಲೆ, ತುಂಟತನ, ಯೌವ್ವನ, ಮಧುರ ಪ್ರೀತಿ, ಅವನ ಶಕ್ತಿ ಸಾಮಥ್ರ್ಯವನ್ನು ಕೊಂಡಾಡುವ ಆಖ್ಯಾನವಾಗಿತ್ತು. ರಕ್ಕಸಿ ಪೂತನಿ ವಧೆ, ಕಂಸನ ವಧೆ, ಕಾಳಿಂಗ ಮರ್ದನ ಮಾಡಿದ ಕೃಷ್ಣನ ಲೀಲೆಗಳು ನೆರೆದಿದ್ದವರನ್ನು ಭಕ್ತಿಸಾಗರದಲ್ಲಿ ತೇಲಿಸಿತು.

      ರಾತ್ರಿ ಹತ್ತಾದರೂ ಗಾಜಿನಮನೆಯಲ್ಲಿ ನೃತ್ಯ ಸಂಭ್ರಮವೋ ಸಂಭ್ರಮ. ಜಗಮಗಿಸುವ ದೀಪದ ಬೆಳಕಿನಾಟದಲ್ಲಿ ಯುವಕ-ಯುವತಿಯರ ವಿವಿಧ ವೇಷ-ಭೂಷಣಗಳಿಂದ ಕೂಡಿದ ನೃತ್ಯ ವೈಭವಗಳು ಕಲಾಸಕ್ತರ ಮನಸನ್ನು ಸೂರೆಗೊಳ್ಳುವಲ್ಲಿ ಯಶಸ್ವಿಯಾದವು.

(Visited 138 times, 1 visits today)