ವಿಕಲಚೇತನರ ಯೋಜನೆಗಳ ಬಗ್ಗೆ ಪೋಷಕರಲ್ಲಿ ಹೆಚ್ಚಿನ ಅರಿವು ಅಗತ್ಯ

ತುಮಕೂರು :
      ವಿಕಲಚೇತನರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅವರು ತಿಳಿಸಿದರು. 
      ನಗರದ ಬಾಲಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಹೊಸ ಕಾಯ್ದೆ ಪ್ರಕಾರ 21 ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ವೈಕಲ್ಯತೆಗಳು ಸೇರ್ಪಡೆಗೊಂಡಿದ್ದು, ವಿಕಲಚೇತನ ರ ಸಂಖ್ಯೆ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಅಂಗವಿಕಲರ ಸಮೀಕ್ಷೆ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಸಂಪೂರ್ಣ ಸಮೀಕ್ಷೆ ನಡೆಸಲು ಎರಡು ವರ್ಷಗಳು ಬೇಕಾಗುವುದು ಎಂದು ಅವರು ತಿಳಿಸಿದರು. 
      ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಗೆ ಹೊಸ ಕಾಯ್ದೆಯಲ್ಲಿ ಕೆಲವೊಂದು ನಿಯಮಗಳ ಬಗ್ಗೆ ಅರಿವು ಬೇಕಾಗಿದೆ ಎಂದು ಅವರು ತಿಳಿಸಿದರು. 
      ತುಮಕೂರು ಜಿಲ್ಲೆಯಲ್ಲಿ ವಿಕಲಚೇತನರಿಗೆ  ಅನುಕೂಲವಾಗುವಂತೆ ಜಿಲ್ಲಾ ಅಂಗವಿಕಲ ಪುನರ್‍ವಸತಿ ಕೇಂದ್ರವನ್ನು ಆದಷ್ಟು ಪುನಾರಂಭಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.  ಅಲ್ಲದೆ ಡಿಇಐಸಿ ಕೇಂದ್ರವನ್ನು ತೆರೆದರೆ ನಾಲ್ಕೈದು ಸಾವಿರ ವಿಕಲಚೇತನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಟರಾಜ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಮೇಶ್, ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ ಮತ್ತಿತರರು ಹಾಜರಿದ್ದರು.

 

(Visited 22 times, 1 visits today)

Related posts