ತುಮಕೂರು:

      ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು 57ನೇ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು.

      ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತೇನೆ. ಇಂದು ನಾನು ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿಗಳಾದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿದ್ದೇನೆ. ಲಿಂ.ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಅವರ ಆಶೀರ್ವಾದ, ಬಸವಣ್ಣನವರ ಆಶೀರ್ವಾದಿಂದ ನಮ್ಮ ರಾಜ್ಯ, ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಿದೆ. ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಿಗಲಿ ಎಂದು ಆಶಿಸುತ್ತೇನೆ ಎಂದರು.

      ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಈಗಾಗಲೇ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಿಗೆ ಪ್ರತಿಯೊಂದು ಮಾಹಿತಿ ಇದೆ. ಚೆಂಡು ವರಿಷ್ಠರ ಅಂಗಳದಲ್ಲಿದೆ. ಶೀಘ್ರವಾಗಿ ಸಂಕ್ರಾಂತಿ ನಂತರ ಅಂದರೆ ನಾಲ್ಕೈದು ದಿನಗಳಲ್ಲಿ ಉತ್ತಮವಾದ ಹಾಗೂ ಒಳ್ಳೆಯ ತೀರ್ಮಾನ ಆಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

      ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸೂಕ್ತವಾದ ತೀರ್ಮಾನವಾಗುತ್ತದೆ. ಪಕ್ಷದ ವರಿಷ್ಠರು ಯಾವ ತೀರ್ಮಾನ ಮಾಡಿದರೂ, ನಾವು ಅದಕ್ಕೆ ಬದ್ಧರಾಗಿದ್ದೇವೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

      ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿದ್ದೇನೆ. ನನ್ನ ಈ ಒಂದು ಕಾರ್ಯ ಕಾಲದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸುತ್ತೇನೆ. ವರಿಷ್ಠರು ಯಾರನ್ನು ಆಯ್ಕೆ ಮಾಡಿದರೂ, ಯಾರಿಗೆ ಪರಿಗಣಿಸಿದರೂ, ನನ್ನ ವತಿಯಿಂದ ಸಂಪೂರ್ಣ ಸಹಕಾರ ಬೆಂಬಲ ಸಿಗುತ್ತದೆ ಎಂದು ಹೇಳಿದರು.

      ಸಿದ್ದರಾಮಯ್ಯ ಅವರು ಪಕ್ಷದ ಅತ್ಯಂತ ಹಿರಿಯ ಮತ್ತು ಪ್ರಬಲ ನಾಯಕರು. ಎಲ್ಲವನ್ನೂ ತಿಳಿದುಕೊಂಡು ಅವರು ಪಕ್ಷದ ಹಿತದೃಷ್ಟಿಯಿಂದ ಒಂದು ಪ್ರಸ್ತಾವನೆ ಸಲ್ಲಿಸುತ್ತಾರೆ ಎಂದರು.

      ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಮಗೆ ಕೊಟ್ಟರೆ ನೀವು ನಿಭಾಯಿಸುತ್ತಿರಾ ಎಂಬ ಪ್ರಶ್ನೆಗೆ, ಈಗಾಗಲೇ ಹೇಳಿದ್ದೇನೆ. ಪಕ್ಷ ನನಗೆ ಯಾವ ಸ್ಥಾನ ಕೊಟ್ಡರೂ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ದುಡಿಯುತ್ತೇನೆ. ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ ಎಂದರು.

      ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಲಿ ನಟರಾಜ್, ರಾಷ್ಟ್ರೀಯ ಸಮಿತಿಯ ಸದಸ್ಯ ರಾಜಶೇಖರ್, ತುಮಕೂರು ಜಿಲ್ಲಾ ಅಧ್ಯಕ್ಷ ಮೋಹನ್‍ಕುಮಾರ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಜಿ.ಎಸ್.ಶ್ರೀಧರ್, ವಸಂತ್ ಮತ್ತಿತರ ಮುಖಂಡರಿದ್ದರು.

(Visited 19 times, 1 visits today)