ಗುಬ್ಬಿ :

      ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಅಗಲೀಕರಣ ನಡೆಸಿ ಗ್ರಾಮಸ್ಥರ ಮನೆಗಳ ಕಾಂಪೌಂಡ್ ತೆರೆವು ನಡೆಸಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಸೂಚನೆ, ನೋಟೀಸ್ ನೀಡದೇ ಏಕಾಏಕಿ ಮನೆಗಳ ಮೇಲೆ ಜೆಸಿಬಿ ಯಂತ್ರ ನುಗ್ಗಿಸಿದ್ದಾರೆ ಎಂದು ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಗ್ರಾಪಂ ವ್ಯಾಪ್ತಿಯ ಎಂ.ಎಸ್.ಪಾಳ್ಯ ಗ್ರಾಮಸ್ಥರು ಆರೋಪಿಸಿದರು.

      ಕೆಆರ್‍ಐಡಿಎಲ್ ಯೋಜನೆಯ 90 ಮೀಟರ್ ಬಾಕ್ಸ್ ಚರಂಡಿ ನಿರ್ಮಾಣದ ಕಾಮಗಾರಿ ಆರಂಭಿಸಿದ ಎಂ.ಎಸ್.ಪಾಳ್ಯ ಗ್ರಾಮದ ಆರಂಭದಲ್ಲೇ ಕೆಲ ಮನೆಗಳ ಕಾಂಪೌಂಡ್ ಒಡೆದುಹಾಕಲಾಗಿದೆ. ಮದ್ಯಾಹ್ನ ವೇಳೆ ದಿಢೀರ್ ಜೆಸಿಬಿ ಯಂತ್ರ ತಂದ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಮುಂದಿಟ್ಟುಕೊಂಡು ಯಾವುದೇ ಮಾತುಕತೆ ಇಲ್ಲದೆ ಮನೆಯ ಕಾಂಪೌಂಡ್ ತೆರೆವುಗೊಳಿಸಿದ್ದಾರೆ. ರಸ್ತೆಯಿಂದ ಬಹುದೂರದಲ್ಲಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಾಂಪೌಂಡ್ ಒಡೆಯುತ್ತಿರುವುದು ದುರುದ್ದೇಶವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

      ಮನೆಯ ಮಾಲೀಕ ಇಲ್ಲದ ಸಂದರ್ಭದಲ್ಲಿ ಕಾಂಪೌಂಡ್ ಒಡೆದ ಅಧಿಕಾರಿಗಳು ನನಗೆ ಯಾವುದೇ ನೋಟೀಸ್ ನೀಡಿಲ್ಲ. ಮೌಖಿಕವಾಗಿ ಸಹ ಹೇಳಿಲ್ಲ ಎಂದು ದೂರಿದ ಸಂತ್ರಸ್ತ ಮಹಮದ್ ಮುಸ್ತಾಫ್ ಏಕಾಏಕಿ ಕಾಂಪೌಂಡ್ ಉರುಳಿಸಿ ನನಗೆ ನಷ್ಟ ಉಂಟು ಮಾಡಿದ್ದಾರೆ. ರಸ್ತೆಯು 50 ಅಡಿಗಳಷ್ಟು ಅಗಲೀಕರಣ ಮಾಡುತ್ತಿರುವುದು ಸಹ ದುರುದ್ದೇಶವಾಗಿದೆ. ಈ ಪುಟ್ಟ ಗ್ರಾಮಕ್ಕೆ ದೊಡ್ಡ ರಸ್ತೆ ನಿರ್ಮಾಣದ ನೆಪಯೊಡ್ಡಿ ನಮಗೆ ತೊಂದರೆ ನೀಡುತ್ತಿದ್ದಾರೆ. ಕೇವಲ 90 ಮೀಟರ್ ಮಾತ್ರ ಅಗಲೀಕರಣದ ಉದ್ದೇಶ ತಿಳಿಯುತ್ತಿಲ್ಲ. ಮುಂದೆ ಇರುವ ಕೆಲವರ ಮನೆಯನ್ನು ಹಾಗೆಯೇ ಬಿಡಲಾಗಿದೆ. ಚರಂಡಿ ನಿರ್ಮಾಣ ಕೇವಲ ಗುತ್ತಿಗೆ ಹಣಕ್ಕೆ ಮಾಡಲಾಗುತ್ತಿದೆ ಎಂದು ದೂರಿದರು.

      ಕಾಂಪೌಂಡ್ ಉರುಳಿಸುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ 50 ಸಾವಿರ ರೂ ನೀಡಿದ್ದಲ್ಲಿ ಕಾಂಪೌಂಡ್ ಉಳಿಸುವುದಾಗಿ ಹೇಳಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಶಿಧರ್ ನಮ್ಮ ಮನೆಯನ್ನು ಉಳಿಸಿಕೊಳ್ಳಲು ನಾವೇ ಲಂಚ ನೀಡಬೇಕಿದೆ. ಈ ದೌರ್ಜನ್ಯವನ್ನು ಕೇಳಲು ಶಕ್ತರಿಲ್ಲದೇ ಪೊಲೀಸರ ಮುಂದೆ ಮೌನವಹಿಸುವಂತಾಗಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ನಮ್ಮ ಕಷ್ಟ ಆಲಿಸುತ್ತಿಲ್ಲ. ರಸ್ತೆ ಅಗಲೀಕರಣ ಮಾಡುವ ಬಗ್ಗೆ ಎಂದೂ ಚರ್ಚಿಸದೇ ಏಕಾಏಕಿ ಕಾಂಪೌಂಡ್ ಒಡೆದುರುಳಿಸಿರುವುದು ಖಂಡನೀಯ. ಈ ಜತೆಗೆ ಯಾವುದೇ ಪರಿಹಾರ ನಮಗೆ ಬೇಕಿಲ್ಲ. ನಮ್ಮ ಮನೆಯನ್ನು ಉಳಿಸಿಕೊಡಬೇಕು ಎಂದು ಸಂತ್ರಸ್ತ ಮಹಮದ್ ಉಬೇದುಲ್ಲಾ ತಮ್ಮ ಅಳಲು ತೋಡಿಕೊಂಡರು. ಮನೆಯಲ್ಲಿ ಯಾರೋ ಇಲ್ಲದ ವೇಳೆಯಲ್ಲಿ ಮನೆಗೆ ಜೆಸಿಬಿ ಯಂತ್ರ ನುಗ್ಗಿಸಿದ್ದಾರೆ. ಬಾಕ್ಸ್ ಚರಂಡಿ ನಿರ್ಮಾಣದ ಹೆಸರಿನಲ್ಲಿ ನಮ್ಮ ಮನೆಗಳಿಗೆ ತೊಂದರೆ ನೀಡುತ್ತಾ ಕೆಲವೇ ಗಂಟೆಗಳಲ್ಲಿ ಕಾಂಪೌಂಡ್ ಉರುಳಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ನನಗೆ ದೂರು ತಳ್ಳಿದ ಅಧಿಕಾರಿಗಳು ನಮ್ಮ ಅಳಲು ಕೇಳದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಸಂತ್ರಸ್ತೆ ಫಾತಿಮಾ ದೂರಿದರು. ಈ ಗ್ರಾಮವು ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಅಗಲೀಕರಣ ರಸ್ತೆಯು ಸಹ ಎರಡೂ ಪಂಚಾಯಿತಿಗೆ ಒಳಪಡುತ್ತದೆ. ಆದರೆ ಎಸ್.ಕೊಡಗೀಹಳ್ಳಿ ಪಂಚಾಯಿತಿ ಅಧಿಕಾರಿಗಳು ಒಂದು ಭಾಗದಲ್ಲಿ ಮಾತ್ರ ಅಗಲೀಕರಣಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಜತೆಗೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಒದಗಿಸುವವರೆಗೆ ಕಾಮಗಾರಿ ನಡೆಸಬಾರದು ಎಂದು ಆಕ್ರೋಶ ಹೊರಹಾಕಿದರು.

(Visited 29 times, 1 visits today)