ತುಮಕೂರು :

      ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದರೂ ಸಹ ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದ್ದು 2018-19 ನೇ ಸಾಲಿನಲ್ಲಿ ದಿನವಹಿ ಸರಾಸರಿ 6,71,712 ಲೀಟರ್ ಶೇಖರಣೆಯಾಗಿರುತ್ತದೆ. ಜೂನ್ 18 ರಂದು 8,01,313 ಲೀಟರ್ ಹಾಲು ಶೇಖರಿಸಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ. ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿರುವುದಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ ಎಂದು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ.

      ಒಕ್ಕೂಟದ ಮಾರಾಟದದ ಜಾಲವನ್ನು ಸಹ ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2018-19 ನೇ ಸಾಲಿನಲ್ಲಿ ಸರಾಸರಿ 2,41,544 ಲೀಟರ್ ಹಾಲನ್ನು ಮತ್ತು ಜೂ.4 ರಂದು 2,63,677 ಲೀಟರ್ ಮಾರಾಟ ಮಾಡಿ ದಾಖಲೆ ನಿರ್ಮಿಸಿರುತ್ತದೆ. ಮುಂಬೈ ಮಹಾನಗರದಲ್ಲಿ 2018-19 ನೇ ಸಾಲಿನಲ್ಲಿ ದಿನವಹಿ ಸರಾಸರಿ 84,896 ಲೀಟರ್ ಮಾರಾಟವಾಗುತ್ತಿದ್ದು, ಜು.23 ರಂದು 1,13,780 ಲೀಟರ್ ಹಾಲಿನ ಮಾರಾಟ ಮಾಡಿ ದಾಖಲೆ ನಿರ್ಮಿಸಲಾಗಿರುತ್ತದೆ.

      ಜಿಲ್ಲೆಯಲ್ಲಿ ತೀವ್ರ ಬರಗಾಲ ಇದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಡಳಿತ ಮಂಡಳಿಯು ಜು.31 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರವನ್ನು ಆ.1 ರಿಂದ ಜಾರಿಗೆ ಬರುವಂತೆ 150/- ಪೈಸೆಗಳಿಗೆ ಹೆಚ್ಚಿಸಿದ್ದು, ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ರುವ ಹಾಲಿಗೆ ಉತ್ಪಾದಕರಿಗೆ 25ರೂ., ಸಂಘಗಳಿ 25.73 ಪೈಸೆ ಹಾಗೂ 4.1 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ 26.28 ಪೈಸೆಯಂತೆ ಸಂಘಗಳಿಗೆ 27.01ಪೈಸೆಯಂತೆ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಒಕ್ಕೂಟಕ್ಕೆ ದಿನ ಒಂದಕ್ಕೆ 11 ಲಕ್ಷಕ್ಕೂ ಹೆಚ್ಚುವರಿ ಖರ್ಚು ಬರಲಿದೆ. ಪ್ರಸ್ತುತ ತುಮಕೂರು ಸಹಕಾರಿ ಹಾಲು ಒಕ್ಕೂಟದ ಈ ದರವು ರಾಜ್ಯದ ಕೋಲಾರ, ಮಂಡ್ಯ, ಮೈಸೂರು, ಹಾಸನ ಮುಂತಾದ ಹಾಲು ಒಕ್ಕೂಟಗಳು ನೀಡುತ್ತಿರುವ ದರಗಳಿಗಿಂತ ಹೆಚ್ಚಿನದಾಗಿರುತ್ತದೆ ಹಾಗೂ ಬೆಂಗಳೂರು ಹಾಲು ಒಕ್ಕೂಟದ ದರಕ್ಕೆ ಸಮನಾಂತರವಾಗಿರುತ್ತದೆ. ಒಕ್ಕೂಟವು ಜಿಲ್ಲೆಯ ಹಾಲು ಉತ್ಪಾದಕರಿಗೆ ದಿನವಹಿ 2 ಕೋಟಿ ರೂ.ಗಳನ್ನು ಬಟವಾಡೆ ಮಾಡುತ್ತಿದೆ.

      ಒಕ್ಕೂಟದ ಬೆಳವಣೀಗೆಗೆ ಸಹಕರಿಸುತ್ತಿರುವ ಡಳಿತ ಮಂಡಳಿ ಸದಸ್ಯರು, ಜಿಲ್ಲೆಯ ಸಮಸ್ತ ಹಾಲು ಉತ್ಪಾದಕರು, ಗ್ರಾಹಕರು, ಒಕ್ಕೂಟದ ಅಧಿಕಾರಿ / ಸಿಬ್ಬಂದಿ ವರ್ಗದವರಿಗೂ ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಹಕಾರಿ ಬಂಧುಗಳಾದ ಮಾಧ್ಯಮ ಮಿತ್ರರು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಪರೋಕ್ಷವಾಗಿ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಲು ಈ ಮೂಲಕ ಕೋರುತ್ತೇನೆ ಎಂದು ತಿಳಿಸಿದರು.

(Visited 17 times, 1 visits today)