ತುಮಕೂರು


ಕಲ್ಪತರುನಾಡಿನ ಶ್ರೀರಾಮ ಹಾಗೂ ಆಂಜನೇಯಸ್ವಾಮಿಯ ದೇವಾಲಯಗಳಲ್ಲಿ ಶ್ರೀರಾಮನವಮಿಯನ್ನು ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಶ್ರೀರಾಮನಾಮ ಸ್ಮರಣೆ ಮೊಳಗಿದವು.
ನಗರದ ಬಾರ್‍ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನಮವಿ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಅದೇ ರೀತಿ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ, ಶೆಟ್ಟಿಹಳ್ಳಿ ಗೇಟ್‍ನಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಾಲಯ, ಸೀತಾರಾಮ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧೆಡೆ ಇರುವ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಶ್ರೀರಾಮನಮಮಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಶ್ರೀರಾಮನಮವಿ ಅಂಗವಾಗಿ ದೇವಾಲಯಗಳಲ್ಲಿ ಪೂಜೆಯ ನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿ, ಹೆಸರುಬೇಳೆ ಹಂಚಲಾಯಿತು.
ಕೆಲವು ಸಂಘ ಸಂಸ್ಥೆಗಳು, ಯುವಕ ಸಂಘಗಳು ಸಹ ಶ್ರೀರಾಮನಮವಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಹಬ್ಬದ ವಿಶೇಷವಾಗಿ ಪಾನಕ, ಮಜ್ಜಿ, ಹೆಸರು ಬೇಳೆ, ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಸಹ ಕಂಡು ಬಂತು.
ಜಿಲ್ಲೆಯ ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಸಿರಾ, ಮಧುಗಿರಿ, ಕೊರಟಗೆರೆ, ತುಮಕೂರು ಹಾಗೂ ಪಾವಗಡ ತಾಲ್ಲೂಕುಗಳಲ್ಲೂ ಸಹ ಶ್ರೀರಾಮೋತ್ಸವವನ್ನು ಆಚರಿಸಲಾಗಿದ್ದು, ಭಕ್ತರು ದೇವಾಲಯಗಳ ಮುಂದೆ ಪೆಂಡಾಲ್ ಹಾಕಿ ಪಾನಕ, ಮಜ್ಜಿ, ಕೋಸಂಬರಿ ಸೇರಿದಂತೆ ಪ್ರಸಾದ ವಿನಿಯೋಗ ಮಾಡಿ ಪುನೀತರಾದರು.
ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲೂ ಸಹ ಹನುಮಂತನ ದೇವಾಲಯ, ಶ್ರೀರಾಮ ದೇಗುಲಗಳಲ್ಲಿ ಜನರು ಶ್ರೀರಾಮೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

(Visited 4 times, 1 visits today)