ತುಮಕೂರು:

      ತುಮಕೂರು ನಗರವು ಬೆಂಗಳೂರಿನ ಸಮೀಪವಿದ್ದು, ತುಮಕೂರು ನಗರ ಅಭಿವೃದ್ಧಿಗೆ ಕೈಗೊಂಡಿರುವ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಅವರು ಇಂದು ಮಹಾನಗರ ಪಾಲಿಕೆಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಹಾಗೂ ಮಹಾನಗರ ಪಾಲಿಕೆಯ ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಒನ್ ಬೈ ಒನ್ ರಂತೆ ಕಾಮಗಾರಿ ಕೈಗೊಂಡು ಇರುವ ಸಮಸ್ಯೆಗಳನ್ನು ಪರಿಹರಿಸುತ್ತಾ ಅಭಿವೃದ್ಧಿ ಸಾಧಿಸಲು ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಅವರಿಗೆ ತಿಳಿಸಿದರು.

     ತುಮಕೂರು ನಗರಕ್ಕೆ ಸುಮಾರು 22 ಹಳ್ಳಿಗಳು ವಿಲೀನಗೊಂಡಿದ್ದು, ಈ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೂ ಅಧಿಕಾರಿಗಳು ಗಮನಹರಿಸಬೇಕು. ಸಚಿವರಾದ ಮೇಲೆ ಪ್ರಥಮ ಬಾರಿಗೆ ತುಮಕೂರಿನ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದು, ಈ ಹಿಂದೆ ಆಗಿರುವ ಮಣ್ಣಿನ ರಸ್ತೆಗಳನ್ನು ಡಾಂಬರೀಕರಣಗೊಳಿಸುವುದು ಮತ್ತು ಅಮೃತ ಯೋಜನೆಯಡಿಯಲ್ಲಿ ನೀರು ಸರಬರಾಜು ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಹೆಚ್ಚಿನ ಒತ್ತು ನೀಡಿ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

      ಇದೇ ಸಂದರ್ಭದಲ್ಲಿ ಪೌರಾಯುಕ್ತ ಹಾಗೂ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಟಿ. ಭೂಬಾಲನ್ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ವಿವರಿಸಿದರು. ಡಿಜಿಟಲ್ ಲೈಬ್ರರಿ, ಸ್ಮಾರ್ಟ್‍ಕ್ಲಾಸ್‍ರೂಂ, ರಿಂಗ್‍ರೋಡ್, ಅಮಾನಿಕೆರೆ, ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.

      ಶಾಸಕ ಜಿ.ಬಿ. ಜ್ಯೋತಿಗಣೇಶ್ ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಗೆ ಬಂದಿರುವ 125 ಕೋಟಿ ಅನುದಾನದಲ್ಲಿ ತುಮಕೂರು ನಗರದ ಬಡಾವಣೆಗಳ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಾಕಾಗುತ್ತಿಲ್ಲ. ವಿಶೇಷವಾಗಿ ತುಮಕೂರು ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ನಲ್ಲಿ ಅನುದಾನ ಒದಗಿಸಲು ಸಚಿವರಲ್ಲಿ ಮನವಿ ಮಾಡಿದರು. ನಗರಸಭೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ನಿರತರಾಗಿರುವುದರಿಂದ ಮಹಾನಗರ ಪಾಲಿಕೆ ಕೆಲಸಗಳಲ್ಲಿ ಅಡಚಣೆ ಉಂಟಾಗಿದೆ. ಇದನ್ನು ಪರಿಹರಿಸಲು ಸಚಿವರು ಮಾರ್ಗದರ್ಶನ ಮಾಡಬೇಕೆಂದು ಅವರು ಕೇಳಿದರು.

     ರೆವಿನ್ಯೂ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಖಾತೆ ಮಾಡಿಕೊಡುವುದು ತೆರಿಗೆ ವಸೂಲಿಯ ಬಗ್ಗೆ ಮತ್ತು ನಗರದ ಸಮಸ್ಯೆಗಳ ಬಗ್ಗೆ ಮಹಾಪೌರರಾಗಿರುವ ಫರೀದಾ ಬೇಗಂ ಸೇರಿ ನಗರಸಭಾ ಸದಸ್ಯರುಗಳು ಸಚಿವರಲ್ಲಿ ಒಕ್ಕೊರಿಲಿನಿಂದ ಮನವಿ ಮಾಡಿದರು.

    ಸಚಿವರು ಈಗ ತಾನೆ ಈ ಖಾತೆಯನ್ನು ವಹಿಸಿಕೊಂಡಿದ್ದು, ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಎಲ್ಲಾ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

     ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಪಾಲಿಕೆಯ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು.

(Visited 12 times, 1 visits today)