ತುಮಕೂರು:

      ಟ್ರಾಯ್‍ನ ಹೊಸ ದರ ನಿಗದಿಪಡಿಸಿರುವ ನೀತಿಯನ್ನು ಖಂಡಿಸಿ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ನಗರಲ್ಲಿ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕೇಬಲ್ ಆಪರೇಟರ್ಸ್ ಟೆಲಿಕಾಮ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

      ಡಿ. 29 ರಿಂದ ಜಾರಿಗೆ ತರಲು ಹೊರಟಿರುವ ಹೊಸ ದರ ನಿಗದಿ ನಿಯಮದಿಂದ ಸ್ಥಳೀಯ ಕೇಬಲ್ ನಿರ್ವಾಹಕರು ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ. ಅಲ್ಲಗೆ ಗ್ರಾಹಕರಿಗೂ ತೊಂದರೆಯುಂಟಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

       ಜಿಲ್ಲೆಯಲ್ಲಿ ಕೇಬಲ್ ನಿರ್ವಾಹಕರು ಮತ್ತು ಸಹಾಯಕರು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಇದೇ ಉದ್ಯೋಗವನ್ನು ಅವಲಂಬಿಸಿದ್ದು, ಕಳೆದ 25 ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರ ಡಿಜಿಟಲೈಜೇಷನ್ ಮಾಡುವ ನೆಪದಲ್ಲಿ ಈಗಾಗಲೇ ಕೇಬಲ್ ನಿರ್ವಾಹಕರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.

      ಇದೇ ತಿಂಗಳ 29 ರಿಂದ ಪ್ರತಿ ಚಾನಲ್‍ಗೂ ದರ ನಿಗದಿ ಮಾಡಿ ಗ್ರಾಹಕರಿಗೂ, ಕೇಬಲ್ ನಿರ್ವಾಹಕರಿಗೂ ಭಾರೀ ಹೊರೆ ಹೊರಿಸಲು ಹೊರಟಿದೆ. ಈ ಅವೈಜ್ಞಾನಿಕ ಪ್ರತ್ಯೇಕ ಚಾನಲ್ ದರದಿಂದ ಚಾನಲ್ ಪ್ರಸಾರಕರಿಗೆ ಹಾಗೂ ಎಂ.ಎಸ್.ಒ.ಗಳಿಗೆ ಅನುಕೂಲವಾಗಲಿದ್ದು, ಸ್ಥಳೀಯ ಕೇಬಲ್ ನಿರ್ವಾಹಕರಿಗೆ ಭಾರೀ ಹೊಡೆತ ಬೀಳಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.

      ಗ್ರಾಹಕರು ಈಗ ನೀಡುತ್ತಿರುವ 200 ರಿಂದ 250 ರೂ. ದರಕ್ಕೆ ಸುಮಾರು 400ಕ್ಕೂ ಹೆಚ್ಚು ಚಾನಲ್‍ಗಳನ್ನು ವೀಕ್ಷಿಸುತ್ತಿದ್ದಾರೆ. ಇದರಲ್ಲಿ ಪೇ ಚಾನಲ್‍ಗಳು ಒಳಗೊಂಡಿರುತ್ತವೆ. ಹೊಸ ದರದ ನಿಯಮದ ಪ್ರಕಾರ 1 ಸಾವಿರಕ್ಕೂ ಅಧಿಕ ಹಣವನ್ನು ಇಷ್ಟೇ ಚಾನಲ್‍ಗಳಿಗೆ ನೀಡಬೇಕಾಗುತ್ತದೆ. ಸರ್ಕಾರ ಬಂಡವಾಳಶಾಹಿಗಳಿಗೆ ದಾರಿ ಮಾಡಿಕೊಟ್ಟು ಕೇಬಲ್ ಉದ್ಯಮವನ್ನೇ ಮುಗಿಸುವ ಹುನ್ನಾರ ಇದಾಗಿದ್ದು, ದೇಶದ ಜನತೆಗೆ ಹೊರ ಹೊರಿಸಲು ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.

     ಪ್ರತಿಭಟನೆಯಲ್ಲಿ ಕೇಬಲ್ ನಿರ್ವಾಹಕರಾದ ಸುರೇಶ್, ಕಲ್ಯಾಣಕುಮಾರ್, ರವೀಂದ್ರ, ನಾಗರಾಜು, ರಾಜೇಶ್ ಗುಬ್ಬಿ, ಮಂಜುನಾಥ್, ಚಿದಾನಂದ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

(Visited 20 times, 1 visits today)