ಗುಬ್ಬಿ:

      ಹೇಮೆ ಹರಿಸಿಕೊಳ್ಳುವ ವಿಚಾರದಲ್ಲಿ ಕಳೆದ ಬಾರಿ ಹಾಸನದಲ್ಲಿ ದೇವೇಗೌಡರ ಪುತ್ರರ ರಾಜಕಾರಣದಿಂದ 18.5 ಟಿಎಂಸಿ ಮಾತ್ರ ನೀರು ಸಿಕ್ಕಿತ್ತು. ಈ ಬಾರಿ ಜಿಲ್ಲೆಯತ್ತ ಹರಿಸಲಾಗುತ್ತಿರುವ ಹೇಮೆಯನ್ನು ನಮ್ಮ ಪಾಲಿನ ಸಂಪೂರ್ಣ 25 ಟಿಎಂಸಿ ನೀರನ್ನು ಹರಿಸಿಕೊಳ್ಳುತ್ತೇವೆ ಎಂದು ಸಂಸದ ಜಿ.ಎಸ್.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.

      ತಾಲ್ಲೂಕಿನ ಹಾಗಲವಾಡಿ ಹೋಬಳಿ ಬೆಟ್ಟದಹಳ್ಳಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಬಾರ್ಡ್‍ನ 22 ಲಕ್ಷ ರೂಗಳ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೇಮಾವತಿ ಬಳಸಿಕೊಳ್ಳುವ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗಿತ್ತು. 18 ಟಿಎಂಸಿ ನೀರಿನಲ್ಲೇ ಬಹುತೇಕ ಕೆರೆಗಳಿಗೆ ನೀರು ನೀಡಲಾಗಿತ್ತು. ಈ ಬಾರಿ ಸಹ ನಿಯಮಾನುಸಾರ ಎಲ್ಲಾ ಕೆರೆಗಳನ್ನೂ ಭರ್ತಿ ಮಾಡುವ ಭರವಸೆ ನೀಡಿದರು.

      ಕಡಬ ಕೆರೆಯು ಕಳೆದ ಬಾರಿಯೇ ತುಂಬಿಸಲಾಗುತ್ತಿತ್ತು. ಇಲ್ಲಿನ ಕೆಟ್ಟ ರಾಜಕಾರಣದಿಂದ ಕಡಬ ಕೆರೆಗೆ ನೀರು ಕಡಿಮೆಯಾಯಿತು. ಈಗಾಗಲೇ ಹೇಮಾವತಿ ಡ್ಯಾಂ ನಿಂದ ಹರಿಯುತ್ತಿರುವ ನೀರು ಒಂದು ದಿನದಲ್ಲಿ ಜಿಲ್ಲೆಗೆ ಪಾದಾರ್ಪಣೆ ಮಾಡಲಿದೆ. ಗುಬ್ಬಿ ತಾಲ್ಲೂಕಿನ ಬು ನಿರೀಕ್ಷೆಯ ಕಡಬ ಕೆರೆ ತುಂಬಿಸುವ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಕೊಬ್ಬರಿಗೆ ಒಂದು ಸಾವಿರ ರೂ ಬೆಂಬಲ ಬೆಲೆ ನಿಗದಿ ಮಾಡಿರುವುದು ಸಾರ್ಥಕ ಎನಿಸಿದೆ. ಕೊರೋನಾ ಮತ್ತು ನೆರೆಹಾವಳಿ ಮಧ್ಯೆ ಕೃಷಿಕರ ಪರ ನಿಂತ ರಾಜ್ಯ ಸರ್ಕಾರ ಕೊಬ್ಬರಿಗೆ ಬೆಂಬಲ ನೀಡಿದೆ. ಮತ್ತಷ್ಟು ನೀಡಲು ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಚ್ಚಿಸಬೇಕಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎನಿಸಿದೆ ಎಂದರು.

      ಸ್ಥಳೀಯ ಪಿಡಿಓ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿನಿಂದ ನಿತ್ಯ ಓಡಾಡುವ ಅಧಿಕಾರಿಗಳ ಬಗ್ಗೆ ದೂರುಗಳಿವೆ. ಈ ಬಗ್ಗೆ ಸ್ಥಳೀಯ ಶಾಸಕರು, ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರು ಗಮನಹರಿಸಬೇಕಿದೆ. ಈ ಜತೆಗೆ ಗ್ರಾಮ ಪಂಚಾಯಿತಿಗಳಲ್ಲಿ ಸಲ್ಲದ ರಾಜಕಾರಣದ ಗುಂಪುಗಳು ಅಧಿಕಾರಿಗಳ ಹಿಡಿತಕ್ಕೆ ಪರದಾಡುತ್ತವೆ. ಈ ಸಮಯದಲ್ಲಿ ಉದ್ದಟತನ ಪ್ರದರ್ಶಿಸುವ ಅಧಿಕಾರಿಗಳನ್ನು ಸಾರ್ವಜನಿಕರೇ ಹಿಡಿತಕ್ಕೆ ತರಬೇಕಿದೆ. ಪಟ್ಟು ಹಿಡಿದು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯದಲ್ಲಿರಿಕೊಳ್ಳಬೇಕು.

      ಈ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದ ಅವರು ಸುಸಂಸ್ಕøತ ನಾಲಿಗೆ ಇಲ್ಲದ ಗುಬ್ಬಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಶಾಸಕರಾಗುವ ಮುನ್ನ ಅವರ ಇತಿಹಾಸ ಅವರಿಂದಲೇ ತಿಳಿದುಕೊಳ್ಳಬೇಕಿದೆ. ಅಧಿಕಾರಿಗಳಿಂದ ಹಣ ಪಡೆಯುವ ಸಂಸ್ಕøತಿ ನನ್ನದಲ್ಲ ಎಂದರು.

      ಈ ಸಂದರ್ಭದಲ್ಲಿ ತಾಪಂ ಸದಸ್ಯ ಅ.ನ.ಲಿಂಗಪ್ಪ, ಮುಖಂಡರಾದ ಶಿವಸ್ವಾಮಿ, ಎಂ.ಎನ್.ಭೀಮಶೆಟ್ಟಿ, ಸಿದ್ದಲಿಂಗಮೂರ್ತಿ, ಬಾಬು, ನಿರಂಜನಮೂರ್ತಿ, ಲೋಕೋಪಯೋಗಿ ಎಇಇ ಸುರೇಶ್, ಪಿಡಿಒ ಮಂಜುನಾಥ್ ಇತರರು ಇದ್ದರು.

(Visited 8 times, 1 visits today)