ಹುಳಿಯಾರು: 

      ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ನಿರ್ಮಾಣವಾಗುತ್ತಿರುವ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯಿಂದ ಎನ್.ಹೆಚ್.150 ಎ ಗೆ ಸೇರುವ ರಸ್ತೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದ್ದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೀರ್ವ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.

      ಸುಮಾರು 3.23 ಕಿ.ಮೀ ಉದ್ದರ ಬರದಲೇಪಾಳ್ಯ, ಯಾಕುಬ್ ಸಾಬ್ ಪಾಳ್ಯ ಸೇರಿದಂತೆ ಇತರೆ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ರಸ್ತೆಗೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಜೂನ್ 2020 ರಲ್ಲಿ ಶಂಕುಸ್ಥಾಪನೆ ಮಾಡಿದ್ದು ಇದೂವರೆವಿಗೂ ಅಂದರೆ 11 ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣಗೊಳ್ಳದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ.

      ಅಲ್ಲದೆ ತಮ್ಮಡಿಹಳ್ಳಿ ಗ್ರಾಮದಲ್ಲಿ ಕೆರೆ ಏರಿಯ ಮೇಲೆ ಒಂದು ಭಾಗದಲ್ಲಿ ರಸ್ತೆ ಮಾಡುತ್ತೇವೆಂದು ಕೆರೆ ಏರಿಯನ್ನು ಬಗೆದು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಕೆರೆ ಏರಿಯ ಮೇಲೆ ಒಂದು ಕಡೆಯಿಂದ ನಾಲ್ಕು ಚಕ್ರದ ವಾಹನ ಬಂದರೆ ಇನ್ನೊಂದು ಕಡೆಯಿಂದ ದ್ವಿಚಕ್ರ ವಾಹನ ಹೋಗಲು ಪರದಾಡುವಂತಾಗಿದೆ. ಇದಲ್ಲದೆ ತಮ್ಮಡಿಹಳ್ಳಿಯಿಂದ ಬರದಲೇಪಾಳ್ಯದ ತನಕ ರಸ್ತೆ ಬದಿಯ ಅಲ್ಲಲ್ಲಿ ಎರಡು ಕಡೆ ಸುಮಾರು 1 ಅಡಿ ಚರಂಡಿ ತೆಗೆದು ಕೆಲವು ಕಡೆ 3 ಅಡಿ ಚರಂಡಿ ತೆಗೆದು ಬಿಟ್ಟಿದ್ದಾರೆ ದನ ಕರುಗಳು, ವಾಹನಗಳು ಓಡಾಡಲು ತುಂಬಾ ತೊಂದರೆಯುಂಟಾಗಿದೆ.

      ಈ ರಸ್ತೆಯನ್ನು ಮಾಡಲು ಕೇಂದ್ರ ಸರ್ಕಾರವು ಸುಮಾರು 289.47 ಲಕ್ಷ ರೂಗಳನ್ನು ಬಿಡುಗಡೆ ಮಾಡಿದೆ, ಇಲಾಖೆಯ ಪ್ರಕಾರ ಕಾಮಗಾರಿಯು ಮುಗಿಸಲು ಮುಂದಿನ ತಿಂಗಳು ಗಡುವು ಇದ್ದು, ಇದುವರೆವಿಗೂ ಶೇ.10 ರಷ್ಟು ರಸ್ತೆ ಕಾಮಗಾರಿ ಸಹ ಮಾಡಿಲ್ಲ. ಹಾಗಾಗಿ ಇನ್ನಾದಾರು ರಸ್ತೆ ಕಾಮಗಾರಿಗೆ ಚುರುಕು ಮುಟ್ಟಿಸಿ ಅದಷ್ಟು ಬೇಗ ಮುಕ್ತಾಯಮಾಡಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

(Visited 6 times, 1 visits today)