ಗುಬ್ಬಿ :

      ಕಬ್ಬಿನ ಆಲೆಮನೆಯಿಂದ ಕಾಕಂಬಿ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಲಾರಿ ರಸ್ತೆ ಡಿವೈಡರ್ ಮಧ್ಯೆ ನುಸುಳಿ ಪಲ್ಟಿಯಾಗಿ ಟ್ಯಾಂಕರ್‍ನಲ್ಲಿದ್ದ ಕಾಕಂಬಿ ಪೂರ್ತಿ ರಸ್ತೆಗೆ ಚೆಲ್ಲಿದ ಘಟನೆ ತಡರಾತ್ರಿ ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ಬಳಿ ಕೇಶಿಪ್ ರಸ್ತೆಯಲ್ಲಿ ನಡೆದಿದೆ.

      ಮಂಡ್ಯದಿಂದ ದಾವಣಗೆರೆಯತ್ತ ಸಾಗಿದ್ದ ಬೃಹತ್ ಟ್ಯಾಂಕರ್ ಲಾರಿ ಕೇಶಿಪ್ ರಸ್ತೆ ಮೂಲಕ ಗುಬ್ಬಿ ತಲುಪಿ ರಾಷ್ಟ್ರೀಯ ಹೆದ್ದಾರಿ 4 ರ ರಸ್ತೆಗೆ ಸಂಪರ್ಕಿಸಬೇಕಿತ್ತು. ಮಾರ್ಗಮಧ್ಯೆ ಚಿಕ್ಕೋನಹಳ್ಳಿ ಗ್ರಾಮದ ಬಳಿ ರಸ್ತೆಗೆ ಇಡಲಾದ ಕಾಂಕ್ರಿಟ್ ಡಿವೇಡರ್‍ಗಳು ಲಾರಿ ಚಾಲಕನಿಗೆ ಗಲಿಬಿಲಿ ಮಾಡಿದೆ. ನೇರ ಡಿವೇಡರ್ ಮಧ್ಯೆ ನುಗ್ಗಿದ ಲಾರಿ ಕೊಂಚ ದೂರ ಚಲಿಸಿ ಪಲ್ಟಿಯಾಗಿದೆ. ಈ ವೇಳೆ ಟ್ಯಾಂಕರ್‍ನಲ್ಲಿದ್ದ ಕಾಕಂಚಿ ಪೂರ್ತಿ ರಸ್ತೆಯಲ್ಲಿ ಹರಿದಿದೆ.

      ಯಾವುದೇ ಪ್ರಾಣಪಾಯ ಸಂಭವಿಸಿದ ಈ ಅಪಘಾತದಿಂದ ರಾತ್ರಿ ಪೂರ್ತಿ ಸಂಚಾರ ಅಸ್ತವ್ಯಸ್ತವಾಯಿತು. ಕಾಕಂಬಿ ರಸ್ತೆಯಲ್ಲಿ ಚೆಲ್ಲಿದ್ದು ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಮುಂಜಾನೆ ವೇಳೆಗೆ ಆಗಮಿಸಿದ ಪೊಲೀಸರು ಲಾರಿಯನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿದರು. ಪ್ರಕರಣ ಗುಬ್ಬಿ ಠಾಣೆಯಲ್ಲಿ ದಾಖಲಾಗಿದೆ. ರೆಡಿಮೇಡ್ ಡಿವೇಡರ್ ಈಗಾಗಲೇ ಸಾಕಷ್ಟು ವಾಹನಗಳ ಅಪಘಾತಕ್ಕೆ ಕಾರಣವಾಗಿದೆ. ಕೆಲ ಗ್ರಾಮದಲ್ಲಿ ರಸ್ತೆ ಮಧ್ಯೆ ದಿಢೀರ್ ಪ್ರತ್ಯಕ್ಷವಾಗುವ ಡಿವೇಡರ್ ಬಗ್ಗೆ ತಿಳಿದುಕೊಳ್ಳುವ ವೇಳೆಗೆ ಅಪಘಾತಕ್ಕೆ ತುತ್ತಾಗಿರುತ್ತಾರೆ. ಪ್ರಾಣ ಕಳೆದುಕೊಂಡ ನಿದರ್ಶನಗಳು ಇಲ್ಲಿವೆ ಎಂದು ಸ್ಥಳೀಯರು ಆರೋಪಿಸಿದರು. ಕಿರಿದಾದ ರಸ್ತೆ ಮಧ್ಯೆ ಡಿವೇಡರ್ ಅಳವಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

(Visited 23 times, 1 visits today)