ತುಮಕೂರು :

       ಶ್ರೀ ಸಿದ್ದಗಂಗಾ ಕ್ಷೇತ್ರದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಗಳು ನೆಲಮಂಗಲ ತಾಲ್ಲೂಕಿ ಬೈರನಾಯ್ಕನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿ, ಇಂದು ವಿಧಿವಶರಾದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರ ಅಂತಿಮ ದರ್ಶನವನ್ನು ಪಡೆದರು.

      ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವರು, ಹಿರಿಯ ರಾಜಕಾರಣಿ ಚನ್ನಿಗಪ್ಪ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಳಗ್ಗೆ 8.15ಕ್ಕೆ ವಿಧಿವಶರಾಗಿದ್ದಾರೆ. ಸುಧೀರ್ಘವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶಿವರಾತ್ರಿಯಂದು ಶಿವನ ಸಾನ್ನಿಧ್ಯ ಸೇರಿದ್ದಾರೆ. ಗ್ರಾಮೀಣ ಭಾಗದಿಂದ ಬಂದು ಉತ್ತಮ ಸಾಧನೆ ಮಾಡಿದ್ದು, ಬೈರನಾಯ್ಕನಹಳ್ಳಿಯನ್ನು ಇಡೀ ದೇಶಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಅವರು ರಾಜಕಾರಣಿಯಾಗಿ ಎಷ್ಟು ಪ್ರಸಿದ್ಧವೋ ಹಾಗೆ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಅನಾರೋಗ್ಯಕ್ಕೆ ತುತ್ತಾದಾಗ ಅವರ ಆರೋಗ್ಯ ಸುಧಾರಣೆಗೆ ಪುತ್ರರು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ ವಿಧಿವಶದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.

       74 ವರ್ಷ ವಯಸ್ಸಾಗಿದ್ದ ಚೆನ್ನಿಗಪ್ಪನವರು ಪತ್ನಿ ಸಿದ್ದಗಂಗಮ್ಮ, ಶಾಸಕ ಡಿ.ಸಿ.ಗೌರಿಶಂಕರ್, ಕೈಗಾರಿಕೋದ್ಯಮಿ ಡಿ.ಸಿ.ಅರುಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಡಾ. ಶಿವಕುಮಾರ ಮಹಾಸ್ವಾಮಿ ವಿದ್ಯಾಲಯದ ಕಾರ್ಯದರ್ಶಿ ಡಿ.ಸಿ.ವೇಣುಗೋಪಾಲ ಸೇರಿದಂತೆ ಮೂರು ಜನ ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ನಾಗರತ್ನ ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

       1951ರ ಜನವರಿ 25ರಂದು ಜನಿಸಿದ್ದ ಚೆನ್ನಿಗಪ್ಪ ಅವರು, ಸಿದ್ದಗಂಗಾ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಿಎ, ಬಿಇಡಿ ಹಾಗೂ ಎಲ್‍ಎಲ್‍ಬಿ ಶಿಕ್ಷಣ ಪಡೆದು 14 ವರ್ಷಗಳ ಕಾಲ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿ ನಂತರ ರಾಜಕೀಯ ಪ್ರವೇಶ ಮಾಡಿ ಕೊರಟಗೆರೆ ಕ್ಷೇತ್ರದಿಂದ ಸತತ ಮೂರು ಶಾಸಕರಾಗಿ ಆಯ್ಕೆಯಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಪರಿಸರ, ಅರಣ್ಯ ಸಚಿವರಾಗಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

      ನಾಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

(Visited 14 times, 1 visits today)