ತುಮಕೂರು:

      ರಾಜ್ಯದ 156 ತಾಲ್ಲೂಕುಗಳು ಬರದಲ್ಲಿ ನರಳುತ್ತಿದ್ದರೆ, ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ದೊಂಬರಾಟವಾಡುತ್ತಿದ್ದು, ರೈತರ ಸ್ಥಿತಿ ಗಂಭೀರವಾಗಿದ್ದರು, ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರುಗಳನ್ನು ಜನರೇ ಕ್ಷೇತ್ರ ಬಿಟ್ಟು ಓಡಿಸುತ್ತಾರೆ ಎಂದು ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದ್ದಾರೆ.

      ನಗರದ ಕನ್ನಡಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ, ಪರಿಹಾರವನ್ನು ದೊರಕಿಸಿಕೊಡಬೇಕಾದ ಶಾಸಕರುಗಳು ಜವಾಬ್ದಾರಿ ಇಲ್ಲದೆ ರೆಸಾರ್ಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ರೈತರ ಸಂಕಷ್ಟದ ಅರಿವಿಲ್ಲದ ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಕಳಕಳಿ ಇಲ್ಲದಂತಾಗಿದೆ ಎಂದು ತಿಳಿಸಿದರು.

      ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದ ಬಿಜೆಪಿ ಮಾಡಿದ್ದು ಕೇವಲ ರಾಜಕೀಯ ಗಿಮಿಕ್ ಅಷ್ಟೇ, ಬರ ಅಧ್ಯಯನದ ನಾಟಕವಾಡಿದರೆ ಹೊರತು ಕೇಂದ್ರದಿಂದ ನಯಾಪೈಸೆ ಅನುದಾನವನ್ನು ಪರಿಹಾರಕ್ಕಾಗಿ ಬಿಡುಗಡೆ ಮಾಡಿಸಲಿಲ್ಲ, ಮತಗಳಿಕೆಗಾಗಿ ಬರ ಅಧ್ಯಯನವನ್ನು ಮಾಡಿದರೆ ಹೊರತು ನಿಜವಾದ ರೈತ ಪರ ಕಳಕಳಿಯಿಲ್ಲ, ಬರದಿಂದ ಜನರು ಗುಳೇ ಹೋಗುತ್ತಿದ್ದಾರೆ, ಮೈವಿಲ್ಲದೇ, ನೀರಿಲ್ಲದೆ ರೈತರು ಹತಾಶರಾಗಿದ್ದಾರೆ, ಈ ಬಗ್ಗೆ ಯಾವುದೇ ಪಕ್ಷಗಳು ಚಿಂತಿಸುತ್ತಿಲ್ಲ ಎಂದರು.

      ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ದಕ್ಷ ಆಡಳಿತವನ್ನು ನೀಡುವಲ್ಲಿ ಅಸಮರ್ಥವಾಗಿದೆ ಹಾಗೆಯೇ ವಿರೋಧ ಪಕ್ಷವಾಗಿಯೂ ಬಿಜೆಪಿ ಸೋತಿದೆ. ಈ ರಾಜಕೀಯ ದೊಂಬರಾಟವನ್ನು ಬಿಟ್ಟು ರೈತ ಸಮುದಾಯದ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ, ಹಳ್ಳಿಗಳತ್ತ ಜನಪ್ರತಿನಿಧಿಗಳು ಇಂತಹ ಸ್ಥಿತಿಯಲ್ಲಿಯೂ ನೋಡದೇ ಇದ್ದರೆ ಹಳ್ಳಿಗಾಡಿನ ಜನರು ನಗರಗಳತ್ತ ಗುಳೇ ಹೊರಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

      ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಹಳ್ಳಿ ನಾಗೇಂದ್ರ ಮಾತನಾಡಿ, ಹಳ್ಳಿಗಾಡಿನ ಸಂಸ್ಕøತಿಯನ್ನು ಬಿಂಬಿಸುವ ಸಂಕ್ರಾಂತಿಯನ್ನು ಶಾಸಕರು ರೆಸಾರ್ಟ್‍ನಲ್ಲಿ ಆಚರಿಸುತ್ತಿರುವುದು ಅಸಹ್ಯವನ್ನುಟ್ಟಿಸುವ ಸಂಗತಿಯಾಗಿದೆ. ರಾಜ್ಯದಲ್ಲಿ ಬರದ ನೋವು, ಕೊಡಗು ಅತಿವೃಷ್ಠಿ, ರೈತರ ಆತ್ಮಹತ್ಯೆ ನಡುವೆ ಮೋಜಿನ ಸಂಕ್ರಾಂತಿ ಮಾಡುತ್ತಿರುವವರ ಅಸಂಸ್ಕøತಿಯನ್ನು ತೋರುತ್ತದೆ, ಇದು ಪ್ರಜಾ ಪ್ರಭುತ್ವದ ಅಣಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫ್ಯಾಸಿಸ್ಟ್ ಕೇಂದ್ರ ಸರ್ಕಾರ ಸಂವಿಧಾನ ಉಳಿಸುತ್ತಿಲ್ಲ ಎನ್ನುವುದಕ್ಕೆ ಕನ್ಹಯ್ಯಕುಮಾರ್ ಮೇಲೆ ಮೂರು ವರ್ಷಗಳ ನಂತರ ಪ್ರಕರಣ ದಾಖಲಿಸಿರುವುದನ್ನು ನೋಡಿದರೆ ತಿಳಿಯುತ್ತದೆ. ನ್ಯಾಯಾಲಯವೇ ನಕಲಿ ವಿಡಿಯೋ ಎಂದು ತೀರ್ಪು ನೀಡಿದ್ದರು, ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶದಿಂದ, ಹೋರಾಟಗಾರರ ಮೇಲೆ ದೇಶದ್ರೋಹಿ ಪಟ್ಟವನ್ನು ಕಟ್ಟಿ, ಮತ ಪಡೆಯುವ ಗಿಮಿಕ್‍ಗಾಗಿ ಕನ್ಹಯ್ಯ ಮೇಲೆ ಇಂದು ಪ್ರಕರಣ ದಾಖಲಿಸಲಾಗಿದ್ದು, ಇದರಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ  ಅರಿತುಕೊಳ್ಳಬೇಕಾಗಿದೆ ಎಂದರು.

 

      ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳಾಗಿದ್ದು, ನೀರು, ಮೇವಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ತುಮಕೂರು-ಶಿವಮೊಗ್ಗ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಭೂಮಿ ಕಳೆದುಕೊಂಡವರಿಗೆ ವೈಜ್ಞಾನಿಕವಾಗಿ ಸೂಕ್ತ ಬೆಲೆ ನಿಗದಿಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ರೈತರು ನಾಲ್ಕೈದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸಂಸದರು, ಸಚಿವರು ರೈತರೊಂದಿಗೆ ಚರ್ಚಿಸಿ ಸೂಕ್ತ ಬೆಲೆ ನಿಗದಿ ಪಡಿಸದೇ ಇದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.

      ಜಲಾಶಯದಲ್ಲಿ ಸಾಕಷ್ಟು ನೀರಿದ್ದರು, ಜಿಲ್ಲೆಗೆ ಹೇಮಾವತಿ ನೀರು ಹರಿಸದೇ ಇರುವ ಕಾರಣ ಜಿಲ್ಲೆಯ ಕೆರೆಗಳಲ್ಲಿ ನೀರಿಲ್ಲ, ನಾಲೆಗಳಲ್ಲಿ ಹೂಳು ತುಂಬಿದ್ದು, ನಾಲೆಗಳನ್ನು ಅಗಲೀಕರಣಗೊಳಿಸಬೇಕು ಎಂದು ಒತ್ತಾಯಿಸಿದ ಅವರು, 69 ಕಿಮೀಯಿಂದ ನಿರ್ಮಿಸಲು ಉದ್ದೇಶಿಸಿರುವ ಎಕ್ಸ್‍ಪ್ರೆಸ್ ಲೈನ್ ಯೋಜನೆಯನ್ನು ಕೈಬಿಡಬೇಕು, ಬಿಕ್ಕೆಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

      ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಸಾಲ ವಿತರಣೆ ಮಾಡುವಾಗ ಶೇ.10 ರಷ್ಟು ಷೇರು ಮೊತ್ತವನ್ನು ಠೇವಣಿಯಾಗಿಟ್ಟುಕೊಂಡಿದ್ದು, ಷೇರು ಮೊತ್ತವನ್ನು ರೈತರಿಗೆ ವಾಪಾಸ್ ನೀಡಬೇಕು ಎಂದು ಒತ್ತಾಯಿಸಿದರು. ತೆಂಗು ಮರಗಳು ಕೆಂಪುಮೂತಿ ರೋಗದಿಂದ ಒಣಗುತ್ತಿದ್ದು, ತೆಂಗಿನ ಮರಗಳು ಒಣಗದಂತೆ ನೂವಾನ್ ಔಷಧಿಯನ್ನು ತೋಟಗಾರಿಕೆ ಪೂರೈಸಬೇಕು ಎಂದರು.
ಸಭೆಯಲ್ಲಿ ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

 

(Visited 33 times, 1 visits today)