ತುಮಕೂರು:

     ನಗರದ ಸಿದ್ದಗಂಗಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೇಟಿ ನೀಡಿ ಈ ಶತಮಾನದ ಸಿದ್ದಿಪುರುಷ, ತ್ರಿವಿಧ ದಾಸೋಹಮೂರ್ತಿ, ಕಾಯಕಯೋಗಿ, ನಡೆದಾಡುವ ದೇವರು ಸಿದ್ದಗಂಗಾ
ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯವನ್ನು ವಿಚಾರಿಸಿದರು.

      ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಶ್ರೀಕ್ಷೇತ್ರದ ಹಳೇಮಠದ ಕೊಠಡಿಗೆ ಶಾಸಕ ಎಸ್. ಸುರೇಶ್‌ಕುಮಾರ್, ಬಿ.ವೈ.ವಿಜಯೇಂದ್ರರವರೊಂದಿಗೆ ತೆರಳಿದ ಯಡಿಯೂರಪ್ಪನವರು ಶ್ರೀಗಳ ದರ್ಶನ ಪಡೆದು ಖುದ್ಧ ಆರೋಗ್ಯವನ್ನು
ವಿಚಾರಿಸಿದರು.

      ಹಳೇ ಮಠದ ಕೊಠಡಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು, ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಶ್ರೀಗಳ ಆರೋಗ್ಯ, ಅವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದು ಸುದೀರ್ಘವಾಗಿ ಚರ್ಚೆ ನಡೆಸಿದರು.

      ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆದಾಡುವ ದೇವರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ದರ್ಶನ ಮಾಡಿ ಬಂದಿದ್ದೇವೆ. ಆಸ್ಪತ್ರೆಯಲ್ಲಿ ನೀಡಬೇಕಾದ ಚಿಕಿತ್ಸೆಯನ್ನೆ ಮಠದಲ್ಲೂ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯದಲ್ಲಿ ನಿರೀಕ್ಷೆ ಮಟ್ಟಕ್ಕೆ ಚೇತರಿಕೆ ಕಂಡು ಬಂದಿಲ್ಲ ಎಂದರು.

      ಶ್ರೀಗಳು ಇಚ್ಛಾಮರಣಿ, ಅವರು ಆರೋಗ್ಯದ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಅವರ ಆರೋಗ್ಯ ಸುಧಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ . ನಾನು ಸಂಜೆವರೆಗೂ ಮಠದಲ್ಲೇ ಇರುತ್ತೇನೆ. ಸಂಜೆ ಸುತ್ತೂರು ಶ್ರೀಗಳು ಸಹ ಮಠಕ್ಕೆ ಆಗಮಿಸುತ್ತಾರೆ. ಅವರು ಬಂದ ಮೇಲೆ ಶ್ರೀಗಳಿಗೆ ಇನ್ನು ಮುಂದೆ ಯಾವ ರೀತಿ ಚಿಕಿತ್ಸೆಯನ್ನು ಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು.

(Visited 19 times, 1 visits today)